(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ವರವಾನಗಿ ಪಡೆದು ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಹೆದ್ದಾರಿಯಲ್ಲಿ ಅಡ್ಡಗಟ್ಟಿ ಚಾಲಕನಿಗೆ ಬೆದರಿಕೆ ಹಾಕಿ ಸುಲಿಗೆಗೆ ಇಳಿದಿದ್ದ ಆರೋಪದಲ್ಲಿ ಯುವ ಕರ್ನಾಟಕ ವೇದಿಕೆಯ ಮೂವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟಿಪ್ಪರ್ ಮಾಲೀಕನ ಪತ್ನಿಯ ಖಾತೆಯಿಂದ 10 ಸಾವಿರ ರೂ. ನಗದನ್ನು ಫೋನ್ ಪೆ ಮೂಲಕ ವಸೂಲಿ ಮಾಡಿದ್ದ ಯುವ ಕರ್ನಾಟಕ ವೇದಿಕೆಯ ಚಾಮರಾಜನಗರ ಜಿಲ್ಲಾಧ್ಯಕ್ಷ ಮೊಹಮ್ಮದ್ ಆಯಾಜ್, ಜಿಲ್ಲಾ ಸಲಹಾ ಗೌರವಾಧ್ಯಕ್ಷ ಇದ್ರೀಶ್ ಪಾಷಾ ಹಾಗೂ ತೌಸಿಫ್ ಬಂಧಿತರು.
ಕನಕಪುರ ತಾಲೂಕು ದೇವೇಗೌಡನ ದೊಡ್ಡಿಯ ಚಾಲಕ ಶಿವಮಾದು ಎಂಬುವರು ನೀಡಿದ ದೂರಿನ ಮೇರೆಗೆ ಈ ಮೂವರನ್ನು ಬಂಧಿಸಲಾಗಿದೆ.
ಹಲಗೂರಿನ ಸೋಮಣ್ಣ ಅವರ ಬಾಬ್ತು ಕೆ.ಎ-11-ಸಿ-5774 ಸಂಖ್ಯೆಯ ಟಿಪ್ಪರ್ ಲಾರಿಗೆ ಡ್ರೈವರ್ ಕೆಲಸವನ್ನು ಮಾಡಿಕೊಂಡಿರುವ ಲಾರಿಯನ್ನು ಕನಕಪುರದ ದೇವರಾಜು ರವರು ವಹಿಸಿಕೊಂಡಿದ್ದು ದೇವರಾಜು ಅವರ ಸೂಚನೆ ಮೇರೆಗೆ ಚಾಲಕ ಶಿವಮಾದು ಜು.14 ರಂದು ಹಂಪಾಪುರ ಮರಳು ಜಾಡಿನಿಂದ ಟಿಪ್ಪರ್ ನಲ್ಲಿ ಪರ್ಮಿಟ್ ಪಡೆದು ಮರಳು ತುಂಬಿ ಕೊಂಡು ಹೋಗುತ್ತಿದ್ದರು.ಆಗ ಮಧ್ಯರಾತ್ರಿ 12 ರ ಸಮಯದಲ್ಲಿ ತಾಲ್ಲೂಕಿನ ನರೀಪುರ ಗ್ರಾಮದ ಬಳಿ ಕೆ.ಎ-42-ಎಂ-3882 ಸಂಖ್ಯೆಯ ಕಾರಿನಲ್ಲಿ ಬಂದ ಮೊಹಮ್ಮದ್ ಅಯಾಜ್, ಇದ್ರೀಶ್ ಪಾಷಾ ಹಾಗೂ ತೌಸಿಫ್ ಅವರುಗಳು ಟಿಪ್ಪರ್ ಲಾರಿಯನ್ನು ತಡೆದು, ಹಣಕ್ಕೆ ಬೇಡಿಕೆ ಇಟ್ಟು ಕೂಡಲೇ ಹಣ ನೀಡುವಂತೆ ಬೆದರಿಕೆ ವೊಡಿದ್ದಾರೆ.
ಅಲ್ಲದೆಹಣ ನೀಡದಿದ್ದರೆ ಪೊಲೀಸ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದಾರೆ. ನಂತರ ಲಾರಿ ಮಾಲಿಕರನ್ನು ಸಂಪರ್ಕ ಮಾಡಿ 10 ಸಾವಿರ ಹಣವನ್ನು ಫೋನ್ ಪೆ ಮೂಲಕ ವರ್ಗಾವಣೆ ಮಾಡಿದ ಬಳಿಕ ಲಾರಿ ಬಿಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವ ವಹಿಸುತ್ತಿದ್ದ ಮೊಹಮ್ಮದ್ ಆಯಾಜ್ ಇಂತಹ ವಸೂಲಿ ದಂಧೆ ಯಿಂದ ಕುಖ್ಯಾತಿ ಯಾಗಿದ್ದ.
ಈ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕೊಳ್ಳೇಗಾಲ ತಾಲ್ಲೂಕು ಘಟಕದ ಅಧ್ಯಕ್ಷನಾಗಿದ್ದ ವೇಳೆಯೂ ಈತನ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿತ್ತು.ಹಾಗಾಗಿ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಕೊಳ್ಳೇಗಾಲ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನದಿಂದ್ದ ಕೆಳಗಿಳಿಸಿ ಬೇರೊಬ್ಬರಿಗೆ ವಹಿಸಿದ್ದರು.
ನಂತರ ನಾರಾಯಣಗೌಡರ ಬಣ ಸೇರಿದ ಈತ ಅಲ್ಲೂ ಇದೇ ಚಾಳಿ ಮುಂದುವರೆಸಿದ್ದರಿಂದ ಅಲ್ಲಿಂದಲೂ ಓಡಿಸಲಾಯಿತು.
ಇದರಿಂದ ವಿಚಲಿತನಾದ ಈತ ಈಗ ಯುವ ಕರ್ನಾಟಕ ವೇದಿಕೆಯ ಚಾಮರಾಜನಗರ ಜಿಲ್ಲಾಧ್ಯಕ್ಷನಾಗಿ ತನ್ನ ಚಾಳಿ ತೋರಲು ಹೋಗಿ ತನ್ನ ಸಹಚರರೊಡನೆ ಇದೀಗ ಜೈಲು ಸೇರಿದ್ದಾನೆ ಎಂಬ ವಿಚಾರ ಕೊಳ್ಳೇಗಾಲದಾದ್ಯಂತ ಚರ್ಚೆಯಾಗುತ್ತಿದೆ.
