ಮೈಸೂರು: ಸಂಸದ ಯದುವೀರ್ ಒಡೆಯರ್ ಅವರು ಇಂದು ಮೈಸೂರಿನ ಕರ್ನಾಟಕ ಸರ್ಕಾರಿ ರಿಸರ್ವ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ಬಂಧನಕ್ಕೊಳಗಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರ ಪರವಾಗಿ ಮಾತನಾಡಿದರು.
ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ರೈಲಿನ ಮೂಲಕ ಮೈಸೂರಿಗೆ ಬಂದಿದ್ದಾರೆ ಎಂಬ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಸ್ಥಳಕ್ಕೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿ, ಅಗತ್ಯ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು.
ನಂತರ ಕಾರ್ಯಕರ್ತರು ವಲಸಿಗರೊಂದಿಗೆ ಪೊಲೀಸ್ ಠಾಣೆಗೆ ತೆರಳಿದರು. ಈ ವೇಳೆ ವಲಸಿಗರು, ಪೊಲೀಸರು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿ ಪೊಲೀಸರು ಸ್ವಯಂ ಪ್ರೇರಿತವಾಗಿ ಆರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದರು.
ಈ ವಿಷಯ ತಿಳಿದ ತಕ್ಷಣ ಸಂಸದ ಯದುವೀರ್ ವಡೆಯಾರ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಸ್ಥಿತಿಯ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು
ತನಿಖೆಗೆ ನಮ್ಮ ವಿರೋಧವಿಲ್ಲ. ಆದರೆ ತನಿಖೆ ನ್ಯಾಯಸಮ್ಮತವಾಗಿ ಮತ್ತು ಸರಿಯಾದ ರೀತಿಯಲ್ಲಿ ನಡೆಯಬೇಕು ಎಂದು ಹೇಳಿದರು.
ವಲಸಿಗರನ್ನು ಮುಕ್ತವಾಗಿ ಬಿಡಲಾಗಿದ್ದು, ನಮ್ಮ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ,ಇದು ಸರಿಯಲ್ಲ ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಎಂದು ತಿಳಿಸಿದರು.
ತನಿಖೆ ಪಕ್ಷಪಾತವಿಲ್ಲದೆ ನಡೆಯಬೇಕು ಹಾಗೂ ಎಲ್ಲರಿಗೂ ಸಮಾನ ನ್ಯಾಯ ದೊರಕಬೇಕು ಎಂದು ಅವರು ಒತ್ತಿ ಹೇಳಿದರು.
ಯದುವೀರ್ ಚರ್ಚಿಸಿದ ನಂತರ ಎಲ್ಲಾ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ರುದ್ರಮೂರ್ತಿ, ಚಾಮರಾಜ ಮಂಡಲ ಅಧ್ಯಕ್ಷ ದಿನೇಶ್ ಗೌಡ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮಂಡಲ ಅಧ್ಯಕ್ಷ ಪೈಲ್ವಾನ್ ರವಿ, ಬಿಜೆಪಿ ಮುಖಂಡ ಗಿರಿಧರ್ ಹಾಗೂ ಇತರ ಹಿಂದೂ ಸಂಘಟನೆಗಳ ಮತ್ತು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
