ಮೈಸೂರು: ಮೈಸೂರು ನಗರದಲ್ಲಿ ವೈಜ್ಞಾನಿಕ ಅಧ್ಯಯನವಿಲ್ಲದೆ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ಗಳಿಗೆ ಸಾರ್ವಜನಿಕರ ತೆರಿಗೆ ಹಣ 8,25,18,487 ದುರುಪಯೋಗವಾಗಿದೆ ಎಂದು ಆರೋಪಿಸಿ ಹಿರಿಯ ವಕೀಲ ಅ.ಮ ಭಾಸ್ಕರ್ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವಕೀಲ ಅ.ಮ ಭಾಸ್ಕರ್, ನಗರದಾದ್ಯಂತ ಹೊಸದಾಗಿ ಅಳವಡಿಸಿರುವ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಸಿಗ್ನಲ್ಗಳಿಗೆ 8,25,18,487 ರೂ ವೆಚ್ಚ ಮಾಡಲಾಗಿದೆ. ಆದರೆ ಭಾರತೀಯ ರಸ್ತೆ ಕಾಂಗ್ರೆಸ್ ಮಾರ್ಗಸೂಚಿಗಳನ್ನು ಪಾಲಿಸದೆ, ಯಾವುದೇ ವೈಜ್ಞಾನಿಕ ವರದಿಯಿಲ್ಲದೆ ಅವೈಜ್ಞಾನಿಕವಾಗಿ ಸಿಗ್ನಲ್ಗಳನ್ನು ಅಳವಡಿಸಲಾಗಿದೆ ಎಂದು ಆರೋಪಿಸಿದರು.
ಹೊಸ ಸಿಗ್ನಲ್ಗಳಿಂದ ಟ್ರಾಫಿಕ್ ಕಡಿಮೆಯಾಗಿದೆ ಎಂದು ಸಂಬಂಧಪಟ್ಟ ಇಲಾಖೆ ಬಿಫೋರ್ ಆಫ್ಟರ್ ಫೋಟೋ ಹಾಕಿ ಪ್ರಚಾರ ಮಾಡುತ್ತಿದೆ. ಆದರೆ ವಾಸ್ತವದಲ್ಲಿ ಹೊಸ ಸಿಗ್ನಲ್ಗಳಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ದೂರಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳ ಪ್ರಕಾರ, ಈ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಕಂಡ ಪ್ರಮುಖ ವೈಜ್ಞಾನಿಕ ಹಾಗೂ ತಾಂತ್ರಿಕ ಅಧ್ಯಯನ ವರದಿಗಳು ಲಭ್ಯವಿಲ್ಲ ಎಂದು ತಿಳಿದುಬಂದಿದೆ:
IRC ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ದಾಖಲೆ ಇಲ್ಲ.
ಟೆಂಡರ್ ಷರತ್ತುಗಳ ಪ್ರಕಾರ ಸಿಮ್ಯುಲೇಷನ್ ವರದಿಗಳು, ಟ್ರಾಫಿಕ್ ಆಪ್ಟಿಮೈಸೇಷನ್ ವರದಿಗಳು ಹಾಗೂ ಕಾರ್ಯಕ್ಷಮತೆ ವರದಿಗಳು ಸಲ್ಲಿಕೆಯಾಗಿಲ್ಲ.
ಸಾರ್ವಜನಿಕರಿಗೆ ತೋರಿಸಲಾದ ಬಿಫೋರ್ ಮತ್ತು ಆಫ್ಟರ್ ಪ್ರಚಾರಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ.
ಮೈಸೂರು ನಗರದಲ್ಲಿ 8,25,18,487 ವೆಚ್ಚದ ಯೋಜನೆ ಅನುಷ್ಠಾನದಲ್ಲಿ ಸಾರ್ವಜನಿಕರ ತೆರಿಗೆ ಹಣದ ದುರುಪಯೋಗವಾಗಿದ್ದು, ಐ ಆರ್ ಸಿ ಮಾರ್ಗಸೂಚಿಗಳನ್ನು ಪಾಲಿಸದೆ ಹಾಗೂ ವೈಜ್ಞಾನಿಕ ವರದಿಯಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಸಿಗ್ನಲ್ಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಅ.ಮ ಭಾಸ್ಕರ್ ಒತ್ತಾಯಿಸಿದ್ದಾರೆ.
ಯೋಜನೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ, ಅಕ್ರಮ ಅಥವಾ ಅಧಿಕಾರ ದುರುಪಯೋಗ ಮಾಡಿರುವ ಅನುಮಾನವಿದೆ. ಸಾರ್ವಜನಿಕರ ತೆರಿಗೆ ಹಣವನ್ನು ವೈಜ್ಞಾನಿಕ ಆಧಾರವಿಲ್ಲದೆ ವೆಚ್ಚ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ವಿಷಯವನ್ನು ಗಂಭೀರ ಸಾರ್ವಜನಿಕ ಹಿತಾಸಕ್ತಿಯ ವಿಷಯವೆಂದು ಪರಿಗಣಿಸಿ, ಹಿರಿಯ ಟ್ರಾಫಿಕ್ ಎಂಜಿನಿಯರಿಂಗ್ ತಜ್ಞರು, ಭಾರತೀಯ ರಸ್ತೆ ಕಾಂಗ್ರೆಸ್ (IRC) ತಜ್ಞರು ಹಾಗೂ ಸ್ವತಂತ್ರ ತನಿಖಾ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯ ಮೂಲಕ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ವಕೀಲ ಅ.ಮ ಭಾಸ್ಕರ್ ಅವರು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
