ಮೈಸೂರು: ಪ್ರಕಾಶ್ ರೈ ಅವರಂತಹ ವಿಕಾರವ್ಯಾಧಿಗಳು ಹಾಗೂ ರಾಹುಲ್ ಗಾಂಧಿಯವರಂತಹ ರಾಜಕೀಯ ನೇತಾರರು ಸ್ವಾತಂತ್ರ್ಯ ವೀರ ಸಾವರ್ಕರ್ ರಂತಹ ಧೀರ ತ್ಯಾಗಮಯಿ ಹೋರಾಟಗಾರರನ್ನು ಗೌರವಿಸದಿದ್ದರೂ ಸಹ ನಿಂದಿಸುವುದನ್ನು ನಿಲ್ಲಿಸಲಿ ಎಂದು ಸಾವರ್ಕರ್ ಪ್ರತಿಷ್ಠಾನ ಮೈಸೂರು ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್ ತಿರುಗೇಟು ನೀಡಿದ್ದಾರೆ
ನಟ ಪ್ರಕಾಶ್ ರೈ ಪ್ರಸ್ತಾಪಿಸಿರುವ ಸಾವರ್ಕರ್ ಅವರ ಕ್ಷಮಾ ಅರ್ಜಿಗಳ ಕುರಿತು ಸ್ಪಷ್ಟನೆ ನೀಡಿರುವ ರಾಕೇಶ್ ಭಟ್ ಸಾವರ್ಕರ್ ಬಗ್ಗೆ ದೀರ್ಘ ಉದಾಹರಣೆ ನೀಡಿದ್ದಾರೆ.
ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯನ್ನು ಆಧರಿಸಿ ಸಾವರ್ಕರ್ ಅವರ ಕ್ಷಮಾಪಣಾ ಅರ್ಜಿಯ ವಿಚಾರವನ್ನು ಪ್ರಕಟಿಸಲಾಗಿದ್ದು ಇದರ ಐತಿಹಾಸಿಕ ಹಿನ್ನೆಲೆ ಹಾಗೂ ಸಂಪೂರ್ಣ ಸನ್ನಿವೇಶದೊಂದಿಗೆ ಅರ್ಥಮಾಡಿಕೊಳ್ಳುವುದು ಅಗತ್ಯವಿದೆ ಎಂದು ರಾಕೇಶ್ ಭಟ್ ತಿಳಿಸಿದ್ದಾರೆ.
ವಿನಾಯಕ ದಾಮೋದರ ಸಾವರ್ಕರ್ ಅವರು ಬ್ರಿಟಿಷರ ಮುಂದೆ ಕ್ಷಮೆ ಕೇಳಿದರು ಅಥವಾ ಕ್ಷಮಾಪಣೆ ಪತ್ರ ಬರೆದರು ಎಂಬ ಆರೋಪವನ್ನು ಆಗಾಗ್ಗೆ ಕಾಂಗ್ರೆಸ್ ನಾಯಕರು ಮಾಡುತ್ತಲೇ ಇದ್ದಾರೆ,ಅವರ ಜತೆಗೆ ಇತ್ತೀಚಿಗೆ ಚಿತ್ರನಟ ಪ್ರಕಾಶ್ ರೈ ಕೂಡ ಪತ್ರಕರ್ತರ ಬಗ್ಗೆ ಹಗುರವಾಗಿ ಮಾತನಾಡಿ ಕ್ಷಮೆ ಕೇಳಲು ಒತ್ತಾಯಿಸಿದಾಗ ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ, ಕೆಲ ಮಾಧ್ಯಮಗಳಲ್ಲಿಯೂ ಕೂಡ
ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯನ್ನು ಆಧರಿಸಿ ಸಾವರ್ಕರ್ ಅವರ ಕ್ಷಮಾಪಣಾ ಅರ್ಜಿಯ ವಿಚಾರವನ್ನು ಪ್ರಕಟಿಸಿದ್ದಾರೆ, ಆದರೆ ಈ ವಿಷಯವನ್ನು ಐತಿಹಾಸಿಕ ಹಿನ್ನೆಲೆ ಹಾಗೂ ಸಂಪೂರ್ಣ ಸನ್ನಿವೇಶದೊಂದಿಗೆ ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ರಾಕೇಶ ಭಟ್ ಅಭಿಪ್ರಾಯ ಪಟ್ಟಿದ್ದಾರೆ.
ಸಾವರ್ಕರ್ ಅವರಿಗೆ ಎರಡು ಜೀವಾವಧಿ ಶಿಕ್ಷೆ (ಒಟ್ಟು 50 ವರ್ಷ) ವಿಧಿಸಿ, ಅಂಡಮಾನ್ನ ಕುಖ್ಯಾತ ‘ಸೆಲ್ಯೂಲಾರ್ ಜೈಲ್’ ನಲ್ಲಿ ಬಂಧಿಸಿ ಕರಿನೀರಿನ ಶಿಕ್ಷೆ, ಸರಪಳಿಯಲ್ಲಿ ಬಂಧಿಸಿ ದಿನಗಟ್ಟಲೆ ಏಕಾಂತವಾಗಿ ನಿಲ್ಲುವ ಶಿಕ್ಷೆ, ಗಾಣದಲ್ಲಿ ಎತ್ತಿನ ರೀತಿ ಎಣ್ಣೆ ತೆಗೆಯುವ ಶಿಕ್ಷೆ, ನೂಲಿನಿಂದ ಮೀಟರ್ ಗಟ್ಟಲೆ ಹಗ್ಗ ಹೊಸೆಯುವ ಶಿಕ್ಷೆ, ಕೆಟ್ಟ ಆಹಾರ, ಗಬ್ಬುನಾರುವ ಜೈಲು ಕೋಣೆ ವಾಸ ಸೇರಿದಂತೆ ಕಠಿಣಾತಿ ಕಠಿಣ ಶಿಕ್ಷೆ ನೀಡಲಾಗುತ್ತಿತ್ತು.
ಅತ್ಯಂತ ಬರ್ಬರ ಹಾಗೂ ಅಮಾನವೀಯ ಪರಿಸ್ಥಿತಿಗಳ ನಡುವೆ ಜೈಲಿನಿಂದ ಬಿಡುಗಡೆಗಾಗಿ ಅವರು ಕೆಲವು ಅರ್ಜಿಗಳನ್ನು ಸಲ್ಲಿಸಿದರು. ಆದರೆ ಅವುಗಳನ್ನು ಕೇವಲ ವೈಯಕ್ತಿಕ ಕ್ಷಮೆಯಾಚನೆ ಎಂದು ಪರಿಗಣಿಸುವುದು ಸರಿಯಲ್ಲ. ಅವು ಕಾರಾಗೃಹದಿಂದ ಬಿಡುಗಡೆ ಹೊಂದಿ ದೇಶಸೇವೆಯನ್ನು ಮುಂದುವರಿಸಲು ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಅನುಸರಿಸಿದ ಒಂದು ತಂತ್ರವೆಂದು ಅನೇಕ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅನೇಕ ಕ್ರಾಂತಿಕಾರಿಗಳು ತಮ್ಮ ತಮ್ಮ ಪರಿಸ್ಥಿತಿಗೆ ಅನುಗುಣವಾಗಿ ವಿಭಿನ್ನ ಮಾರ್ಗಗಳನ್ನು ಅನುಸರಿಸಿದ್ದರು. ಸಾವರ್ಕರ್ ಅವರ ಅಭಿಪ್ರಾಯದಂತೆ, ಕಾರಾಗೃಹದಲ್ಲೇ ಉಳಿದುಕೊಳ್ಳುವುದರಿಂದ ದೇಶಕ್ಕಾಗಿ ತಾವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಬಿಡುಗಡೆಯ ನಂತರವೂ ಅವರು ಸಾಮಾಜಿಕ ಸುಧಾರಣೆ, ರಾಜಕೀಯ ಚಟುವಟಿಕೆ, ರಾಷ್ಟ್ರೀಯ ಚಿಂತನೆಗಳ ಪ್ರಸಾರ ಮತ್ತು ಸಂಘಟನಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.
ಇನ್ನೊಂದು ಪ್ರಮುಖ ಸಂಗತಿ ಎಂದರೆ, ಕ್ಷಮಾ ಅರ್ಜಿಗಳನ್ನು ಸಲ್ಲಿಸುವುದು ಸಾವರ್ಕರ್ ಅವರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಆ ಕಾಲದ ಅನೇಕ ರಾಜಕೀಯ ಬಂಧಿಗಳು ತಮ್ಮ ಬಿಡುಗಡೆಗಾಗಿ ಕಾನೂನುಬದ್ಧ ಮತ್ತು ಆಡಳಿತಾತ್ಮಕ ಮಾರ್ಗಗಳನ್ನು ಬಳಸಿಕೊಂಡಿದ್ದರು. ಇದರಿಂದ ಅವರ ದೇಶಭಕ್ತಿ ಅಥವಾ ಹೋರಾಟದ ಬದ್ಧತೆ ಪ್ರಶ್ನಾರ್ಥಕವಾಗುವುದಿಲ್ಲ.
ಆದ್ದರಿಂದ ಸಾವರ್ಕರ್ ಅವರ ಅರ್ಜಿಗಳನ್ನು ಕೇವಲ “ಸಾರಿ ಪತ್ರಗಳು” ಎಂದು ಬಣ್ಣಿಸುವುದು ಐತಿಹಾಸಿಕ ಸತ್ಯದ ಸರಳೀಕರಣ ಮತ್ತು ವಾಸ್ತವದ ವಿಕೃತೀಕರಣವಾಗಿದೆ. ಅವರ ಕಾರಾಗೃಹದ ಪರಿಸ್ಥಿತಿ, ಆ ಕಾಲದ ಆಡಳಿತಾತ್ಮಕ ಭಾಷೆಯ ಬಳಕೆ ಹಾಗೂ ಬಿಡುಗಡೆಯ ನಂತರದ ಅವರ ಸಾರ್ವಜನಿಕ ಜೀವನವನ್ನು ಸಮಗ್ರವಾಗಿ ಪರಿಗಣಿಸಿದಾಗ ಮಾತ್ರ ನ್ಯಾಯಯುತವಾದ ಮೌಲ್ಯಮಾಪನ ಸಾಧ್ಯ.
ಇತಿಹಾಸವನ್ನು ಆಯ್ದ ಉಲ್ಲೇಖಗಳು ಅಥವಾ ರಾಜಕೀಯ ಪೂರ್ವಾಗ್ರಹಗಳ ಆಧಾರದ ಮೇಲೆ ಅಲ್ಲ, ಸಂಪೂರ್ಣ ಸತ್ಯಾಂಶಗಳು ಮತ್ತು ಸನ್ನಿವೇಶದ ಆಧಾರದ ಮೇಲೆ ಅಧ್ಯಯನ ಮಾಡಬೇಕು.
ಇದನ್ನೇ ಸರ್ವೋಚ್ಚ ನ್ಯಾಯಾಲಯ ಸಾವರ್ಕರ್ ವಿಚಾರವಾಗಿ ರಾಹುಲ್ ಗಾಂಧಿಯವರಿಗೆ ಛೀಮಾರಿ ಹಾಕುವಾಗ ಪ್ರಸ್ತಾಪ ಮಾಡಿರುವುದನ್ನು ಕೂಡ ಗಮನಿಸಬಹುದು. ಭಾರತದ ಸರ್ವೋಚ್ಚ ನ್ಯಾಯಾಲಯ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ವಿರುದ್ಧ ಹೊರಡಿಸಲಾಗಿದ್ದ ಕ್ರಿಮಿನಲ್ ಮಾನನಷ್ಟ ಸಮನ್ಸ್ಗೆ ತಾತ್ಕಾಲಿಕ ತಡೆ ನೀಡಿದರೂ, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತು ಅವರು ನೀಡಿದ “ಬೇಜವಾಬ್ದಾರಿ” ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇದೇ ರೀತಿಯ ಹೇಳಿಕೆಗಳನ್ನು ಭವಿಷ್ಯದಲ್ಲಿ ಪುನರಾವರ್ತಿಸಿದರೆ ನ್ಯಾಯಾಲಯವೇ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತು. ಮುಂದುವರೆದು ನ್ಯಾಯಮೂರ್ತಿಗಳಾದ ದೀಪಾಂಕರ ದತ್ತಾ ಮತ್ತು ಮನಮೋಹನ್ ಅವರು ರಾಹುಲ್ ಗಾಂಧಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, “ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಹಾಸ್ಯ ಮಾಡಬೇಡಿ” ಎಂದು ಹೇಳಿದರು.
ಜೊತೆಗೆ, ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರೇ ಸಾವರ್ಕರ್ ಅವರ ಪರಂಪರೆಯನ್ನು ಪ್ರಶಂಸಿಸಿ ಪತ್ರ ಬರೆದಿದ್ದ ವಿಷಯ ನಿಮಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದ್ದರು.
ಇನ್ನು ಮುಂದಾದರೂ ಪ್ರಕಾಶ್ ರೈ ಅವರಂತಹ ವಿಕಾರವ್ಯಾಧಿಗಳು ಹಾಗೂ ರಾಹುಲ್ ಗಾಂಧಿಯವರಂತಹ ರಾಜಕೀಯ ನೇತಾರರು ಸ್ವಾತಂತ್ರ್ಯ ವೀರ ಸಾವರ್ಕರ್ ಅಂತಹ ಧೀರ ತ್ಯಾಗಮಯಿ ಹೋರಾಟಗಾರರನ್ನು ಗೌರವಿಸದಿದ್ದರೂ ಸಹ ನಿಂದಿಸುವುದನ್ನು ನಿಲ್ಲಿಸಲಿ ಎಂದು ರಾಕೇಶ್ ಭಟ್ ಒತ್ತಾಯಿಸಿದ್ದಾರೆ.
