ಮಾಸ್ಕೋ: ರಷ್ಯಾ- ಉಕ್ರೇನ್ ಯುದ್ಧ ಮತ್ತೆ ಹೊಸ ತಿರುವನ್ನು ಪಡೆದುಕೊಂಡಿದ್ದು, ಉಕ್ರೇನ್ ಸೇನೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭಾರೀ ಡ್ರೋನ್ ದಾಳಿ ನಡೆಸಿದೆ.ಇದರಿಂದಾಗಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಸ್ಕೋದ ಅತೀ ದೊಡ್ಡ ತೈಲ ಸಂಸ್ಕರಣಾ ಘಟಕದ ಮೇಲೆ ಭಾರೀ ಡ್ರೋಣ್ ದಾಳಿ ನಡೆಸಿದೆ. ಉಕ್ರೇನ್ನ ಡ್ರೋನ್ಗಳು ಮಾಸ್ಕೋದಲ್ಲಿರುವ ಪೆಟ್ರೋಲಿಯಂ ಕಚ್ಚಾ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಘಟಕಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ, ದಟ್ಟ ಹೊಗೆ ವ್ಯಾಪಕವಾಗಿ ಹರಡಿತ್ತು.
ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ದೇಶಾದ್ಯಂತ 555 ಉಕ್ರೇನಿಯನ್ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ. ಸದ್ಯ ಡ್ರೋನ್ ದಾಳಿ ಬಳಿಕ ಹಲವು ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ದಾಳಿಯು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕೃತ ಕಚೇರಿ ಇರುವ ಕ್ರೆಮ್ಲಿನ್ ಪ್ರದೇಶದ ಸಮೀಪದಲ್ಲೇ ಡ್ರೋನ್ಗಳು ದಾಳಿ ಮಾಡಿವೆ.
ದಾಳಿಯ ಬಳಿಕ ರಷ್ಯಾದ ಭದ್ರತಾ ಪಡೆಗಳು ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿದರು.
ಫ್ರಾನ್ಸ್ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಿದ ಕೆಲವೇ ಗಂಟೆಗಳ ನಂತರ ಡ್ರೋನ್ ದಾಳಿ ನಡೆದಿದೆ.
