ಬೆಂಗಳೂರು: ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್ ನಂತಹ ಅತ್ಯಂತ ವಿಭಜನಕಾರಿ, ದೇಶ ವಿದ್ರೋಹಿ ಸಂಘಟನೆಯೊಂದಿಗೆ ಅಧಿಕಾರದ ಲಾಲಸೆಗಾಗಿ ರಾಜಕೀಯ ಮೈತ್ರಿ ಮಾಡಿಕೊಂಡು ಎರಡೆರಡು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಆರ್ಎಸ್ ಎಸ್ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವದ ಪವಿತ್ರ ದೇಗುಲವಾದ ವಿಧಾನಸೌಧದ ಮುಂದೆಯೇ ದೇಶವಿರೋಧಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಅಟ್ಟಹಾಸದಿಂದ ಘೋಷಣೆ ಕೂಗಿದರೂ, ಕಣ್ಣು-ಕಿವಿ ಮುಚ್ಚಿ ಕುಳಿತು, ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಉದ್ಧಟತನದಿಂದ ಸಮರ್ಥನೆ ಮಾಡಿಕೊಂಡ ಸಚ್ಚಾರಿತ್ರ್ಯ ಈ ಪ್ರಿಯಾಂಕ್ ಖರ್ಗೆ ಅವರದ್ದು ಎಂದು ಟೀಕಿಸಿದ್ದಾರೆ.
ಇಂತಹ ದೇಶದ್ರೋಹಿ ಮಾನಸಿಕತೆಯ ರಕ್ಷಕರು, ಕಳೆದ ನೂರು ವರ್ಷಗಳಿಂದ ಯಾವುದೇ ಅಪೇಕ್ಷೆಯಿಲ್ಲದೆ, ನಿಸ್ವಾರ್ಥವಾಗಿ ಭಾರತಾಂಬೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರಭಕ್ತ ಸಂಘಟನೆ ಆರ್ಎಸ್ಎಸ್ ನ ಕಾನೂನು ಬದ್ಧತೆ ಹಾಗೂ ದೇಶನಿಷ್ಠೆಯನ್ನು ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ, ನಾಚಿಕೆಗೇಡಿತನದ ಪರಮಾವಧಿ ಎಂದು ಟೀಕಿಸಿದ್ದಾರೆ.
ಮುಂದೆ 2028ರ ವಿಧಾನಸಭಾ ಚುನಾವಣೆಯಲ್ಲೂ ನಾನೇ ಕಾಂಗ್ರೆಸ್ನ ಸಿಎಂ ಅಭ್ಯರ್ಥಿ ಎಂದು ಹಗಲುಗನಸು ಕಾಣುತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಸದ್ದಿಲ್ಲದಂತೆ ಸೆಡ್ಡು ಹೊಡೆಯಲು ಪ್ರಿಯಾಂಕ್ ಖರ್ಗೆ ಅವರ ಈ ರಾಜಕೀಯ ತಂತ್ರಗಾರಿಕೆ ಚೆನ್ನಾಗಿದೆ ಎಂದು ಅಶೋಕ್ ಕಾಲೆಳೆದಿದ್ದಾರೆ.
ತಮಗೆ ಈವರೆಗೂ ವಹಿಸಿಕೊಡಲಾಗಿದ್ದ ಐಟಿ-ಬಿಟಿ, ಗ್ರಾಮೀಣಾಭಿವೃದ್ಧಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸೇರಿದಂತೆ ಪ್ರತಿಯೊಂದು ಇಲಾಖೆಯ ಜವಾಬ್ದಾರಿಯಲ್ಲೂ ಪೂರ್ಣವಾಗಿ ವಿಫಲರಾಗಿ, ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ‘ಅಟ್ಟರ್ ಫ್ಲಾಪ್’ ಸಚಿವ ಎನಿಸಿಕೊಂಡಿರುವ ವ್ಯಕ್ತಿ ಪ್ರಿಯಾಂಕ್ ಖರ್ಗೆ
ಎಂದು ಜರಿದಿದ್ದಾರೆ.
ದಿನದ 24 ಗಂಟೆಯೂ ಆರ್ ಎಸ್ಎಸ್ ಜಪ’ ಮಾಡುತ್ತಾ, ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿರಲು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ.ಅವರ
ಇಂತಹ ಸವಕಲು ರಾಜಕೀಯ ತಂತ್ರಗಳಿಗೆ ಹಾಗೂ ದೇಶವಿರೋಧಿ ಧೋರಣೆಗಳಿಗೆ ಕರ್ನಾಟಕದ ಪ್ರಬುದ್ಧ, ಪ್ರಜ್ಞಾವಂತ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಅಶೋಕ್ ಕಠಿಣ ಎಚ್ಚರಿಕೆ ನೀಡಿದ್ದಾರೆ.
