ಮೈಸೂರು: ಸರ್ಕಾರಿ ಶಾಲೆಗಳ ಬಲವರ್ದನೆಗೆ ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ಈ ಹೊತ್ತಿನಲ್ಲಿ ಆರೋಗ್ಯ ನಿರೀಕ್ಷಕರೊಬ್ಬರು ತಮ್ಮ ಅಳಿಲು ಸೇವೆ ಮೂಲಕ ಸರ್ಕಾರಿ ಶಾಲಾ ಮಕ್ಕಳ ನೆರವಿಗೆ ನಿಂತಿದ್ದಾರೆ.
ಕಡಕೊಳ ಗ್ರಾಮದ ಕಡಕೊಳ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಮಂಜುನಾಥ್ ಅವರೇ ಇಂತಹದೊಂದು ಅಳಿಲು ಸೇವೆ ಮಾಡುತ್ತಿದ್ದಾರೆ.
ಅಗ್ರಹಾರ ಮೂಲದ ನಿವಾಸಿ ಹಾಗೂ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ನಗರ ಯೋಜನ ಕಚೇರಿಯಲ್ಲಿ ತಾಂತ್ರಿಕ ಸಹಾಯಕರಾಗಿದ್ದ ಮಂಜುನಾಥ್ ಮೂರು ವರ್ಷಗಳಿಂದ ಕಡಕೊಳ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಶಾಲೆ ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ 20 ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪೆನ್ನು, ಪುಸ್ತಕ, ಪೆನ್ಸಿಲ್, ರಬ್ಬರ್, ಡ್ರಾಯಿಂಗ್ ಪುಸ್ತಕ ಜಾಮಿಟ್ರಿ ಬಾಕ್ಸ್ ಇತ್ಯಾದಿ ಪರಿಕರಗಳನ್ನು ನೀಡಲು ಆರಂಭಿಸಿದ್ದಾರೆ.
ಈ ಕುರಿತು ಮಾತನಾಡಿದ ಮಂಜುನಾಥ್, ಸ್ಥಿತಿವಂತರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಾರೆ. ಉಳಿದವರು ಸಾಮಾನ್ಯವಾಗಿ ಸರ್ಕಾರಿ ಶಾಲೆಗೆ ಬರುತ್ತಾರೆ. ನನಗೆ ಅಂತಹವರ ಸ್ಥಿತಿಯ ಅರಿವಿದೆ, ಅದೇ ಕಾರಣಕ್ಕಾಗಿ ಶಿಕ್ಷಣದ ಮೌಲ್ಯ ಹೆಚ್ಚಿಸಲು ಮಕ್ಕಳಿಗೆ ಈ ಅಳಿಲು ಸೇವೆಯನ್ನು ಮೂರು ವರ್ಷದಿಂದ ಮಾಡುತ್ತಿದ್ದೇನೆ ಎಂದು ಹೇಳಿದರು.
ಈ ಮೂಲಕವಾದರೂ ಸರ್ಕಾರಿ ಶಾಲೆಗಳ ನೊಂದಣಿ ಸಂಖ್ಯೆ ಹೆಚ್ಚಿ ಮೌಲ್ಯಯುತ ಶಿಕ್ಷಣ ದೊರಕುವಂತಾಗಬೇಕು ಆಶಯ ವ್ಯಕ್ತಪಡಿಸಿದರು.
ಕೃಷ್ಣಮೂರ್ತಿಪುರಂನಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸುವ ಮೂಲಕ ತಮ್ಮ ಶೈಕ್ಷಣಿಕ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಚಂಪಾ,ಸಮಾಜ ಸೇವಕ ಎಸ್ ಎನ್ ರಾಜೇಶ್ ಮತ್ತಿತರರು ಹಾಜರಿದ್ದರು.
