ಯಾದಗಿರಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಶುಕ್ರವಾರ ಯಾದಗಿರಿ ಜಿಲ್ಲೆಗೆ ಭೇಟಿ ನೀಡಿ ಬೆಳಗಿನಿಂದಲೇ ವಿವಿಧ ಸ್ಥಳಗಳಿಗೆ ತೆರಳಿ ಪರಿಶೀಲಿಸಿದರು.
ಬೆಂಗಳೂರಿನಿಂದ ಉದ್ಯಾನ ಎಕ್ಸಪ್ರೆಸ್ ರೈಲಿನಲ್ಲಿ ಯಾದಗಿರಿಗೆ ಆಗಮಿಸಿದ ಲೋಕಾಯುಕ್ತರು, ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ವಿರಮಿಸಿ, ನಂತರ ಬೆಂಗಳೂರಿನ ಲೋಕಾಯುಕ್ತ ಕಚೇರಿಯ ಅಧಿಕಾರಿಗಳು, ಯಾದಗಿರಿ ಲೋಕಾಯುಕ್ತ ಪೊಲೀಸರು ಮತ್ತು ಇತರ ಅಧಿಕಾರಿಗಳೊಂದಿಗೆ ವಿವಿಧೆಡೆ ಅನಿರೀಕ್ಷಿತ ಭೇಟಿ ನೀಡಿದರು.
ಕೆ.ಎನ್. ಫಣೀಂದ್ರ ಅವರು ಮೊದಲು ಯಾದಗಿರಿಯ ಹಳೇ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿನ ಸ್ವಚ್ಚತೆ, ಸಾರ್ವಜನಿಕ ಶೌಚಾಲಯವನ್ನು ಪರಿಶೀಲಿಸಿದರು.
ಸಾರ್ವಜನಿಕರಿಂದ ನಿಗದಿತ ದರದಲ್ಲಿ ಮಾತ್ರ ಹಣ ಸ್ವೀಕರಿಸಬೇಕು,೩ ರೂ. ದರ ನಿಗದಿಪಡಿಸಿ ೧೦ ರೂ ಯಾಕೆ ತೆಗೆದುಕೊಳ್ಳುತ್ತೀರಿ ಎಂದು ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಹೆಚ್ಚಿನ ದರ ವಸೂಲಿ ಮಾಡಿದಲ್ಲಿ ಸೂಕ್ತ ಕ್ರಮ ಕೈಗಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸಂಬಂಧಿಸಿದ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಬೇಕು. ಹೆಚ್ಚಿನ ದರ ವಸೂಲಿ ಕುರಿತು ಗಮನಹರಿಸಬೇಕು. ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಸ್ ನಿಲ್ದಾಣದ ಶೌಚಾಲಯದಲ್ಲಿ ಬೀಡಿ, ಸಿಗರೇಟ್ ಬೆಂಕಿ ಪಟ್ಟಣ ಇಡದಂತೆ ಅಲ್ಲಿನ ಸಿಬ್ಬಂದಿಗಳಿಗೆ ಕಡಕ್ ವಾರ್ನಿಂಗ್ ಮಾಡಿದರು.
ಅಲ್ಲದೆ ಸಂಬಂಧಿಸಿದ ಅಧಿಕಾರಿಗಳು ದಿನಕ್ಕೆ ಅರ್ಧಗಂಟೆಯಾದರೂ ಇಂತಹ ಸಮಸ್ಯೆ ಕುರಿತು ಗಮನಹರಿಸಿ, ಪರಿಶೀಲಿಸ ಬೇಕು,ಇದನ್ನು ಪಾಲಿಸದ ಶೌಚಾಲಯದ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಉಪ ಲೋಕಾಯುಕ್ತರು ಸೂಚಿಸಿದರು.
ಬಸ್ ನಿಲ್ದಾಣದಲ್ಲಿನ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಕುರಿತು ಸಾರ್ವಜನಿಕರ ಅಭಿಪ್ರಾಯ ಕೇಳಿದರು. ನಂತರ ಸ್ಥಳೀಯ ಪೊಲೀಸರು ೧೫ ದಿನಕೊಮ್ಮೆ ಬಸ್ ನಿಲ್ದಾಣಕ್ಕೆ ಭೇಟಿ ನೀಡುವಂತೆ ಸೂಚಿಸಿದರು.
ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲೆಂದೇ ಸರ್ಕಾರಿ ನೌಕರರನ್ನ ನೀಡಲಾಗಿದೆ. ಅಧಿಕಾರವನ್ನು ಸರಿಯಾಗಿ ಬಳಸಿಕೊಳ್ಳಬೇಕು.ನಿಗದಿತ ಸಮಯಕ್ಕೆ ಬಸ್ ಗಳನ್ನು ಸಾರ್ವಜನಿಕರ ಅನುಕೂಲಕ್ಕೆ ಒದಗಿಸಬೇಕೆಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಬಸ್ ನಿಲ್ದಾಣದ ಹೊರಗಡೆಯ ಆವರಣವನ್ನು ಪರಿಶೀಲಿಸಿದರು. ಬಸ್ ನಿಲ್ದಾಣದ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ನಗರ ಸಭೆಯ ಪೌರಾಯುಕ್ತರಾದ ಉಮೇಶ್ ಚೌವ್ಹಾಣ್ ಅವರಿಗೆ ಫಣೀಂದ್ರ ಸೂಚಿಸಿದರು.
ನಂತರ ಉಪಲೋಕಾಯುಕ್ತರು ಡಾನ್ ಭಾಸ್ಕೋ ಹತ್ತಿರದ ಹಳ್ಳಕ್ಕೆ ಬೇಡಿ ನೀಡಿ ಕಲುಷಿತ ನೀರು ಹಳ್ಳಕ್ಕೆ ಬಿಡಬಾರದು ಅದನ್ನು ಸಂಸ್ಕರಿಸುವ ಪ್ರಕ್ರಿಯೆ ಹೇಗೆ ಮಾಡಬೇಕು ಎಂಬುದನ್ನು ಒಂದು ಸಲ ಮೈಸೂರಿಗೆ ಹೋಗಿ ನೋಡಿ ಬನ್ನಿ ಅಲ್ಲಿ ಹೇಗೆ ಮಾಡುತ್ತಾರೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೇಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ,
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಿದ್ದರಾಜು, ಡಿವೈಎಸ್ಪಿ ಹೆಚ್.ಇನಾಂದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
