ಯಳಂದೂರು: ಯಳಂದೂರು ತಾಲೂಕಿನ ವೈ.ಕೆ. ಮೋಳೆ ಗ್ರಾಮದಲ್ಲಿ ಹಲವು ವರ್ಷಗಳಿಂದ ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿ ಅರ್ಧಕ್ಕೆ ನಿಂತಿದ್ದು,ಈ ಸಮಸ್ಯೆ ಬಗೆಹರಿಸದಿದ್ದರೆ ಜೂ. 15 ರಂದು ಯಳಂದೂರಿನಿಂದ ಚಾಮರಾಜನಗರದ ಜಿಲ್ಲಾಡಳಿತ ಭವನಕ್ಕೆ ಬೃಹತ್ ಕಾಲ್ನಡಿಗೆ ಜಾಥ ನಡೆಸಲಾಗುವುದು ಎಂದು ಎ.ಎಸ್.ಎಸ್.ಕೆ ರಾಜ್ಯಾಧ್ಯಕ್ಷ ಡಾ.ಕೆ.ಎಂ. ಸಂದೇಶ್ ಎಚ್ಚರಿಸಿದರು.
ಈ ಸಂಬಂಧ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ ತೆರಳಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗ್ರಾಮದ ದಲಿತ ಜನಾಂಗದವರ ಜೊತೆ ಸಭೆ ನಡೆಸಿ, ನಂತರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ತೆರಳಿ ಅವರು ಮಾತನಾಡಿದರು.
ಈ ಗ್ರಾಮದ ಗ್ರಾಮ ಠಾಣ ಸರಹದ್ದಿನಲ್ಲಿ 3.11 ಗುಂಟೆ ಜಮೀನು ಇದೆ. ಇದರ ಪೈಕಿ 2.03 ಎಕರೆ ಜಮೀನು ಮತ್ತು 1.08 ಎಕರೆ ಜಮೀನು ಖರಾಬು ಜಮೀನು. ಈ ಜಾಗದಲ್ಲೇ ಅಂಬೇಡ್ಕರ್ ಭವನವನ್ನು ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆ ಜಾಗ ಗುರುತಿಸಿಕೊಟ್ಟಿದೆ ಎಂದು ಅವರು ಹೇಳಿದರು.
ಇಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಇಲಾಖೆಯಿಂದ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಈ ಜಾಗದ ವಿಷಯವಾಗಿ ಎರಡು ಕೋಮಿನ ನಡುವೆ ಗೊಂದಲ ಏರ್ಪಟ್ಟಿದ್ದು ಕಳೆದ 4 ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ತಿಳಿಸಿದರು.
ಕೂಡಲೇ ಇಲಾಖೆಯ ಅಧಿಕಾರಿಗಳು ಸವೇ ನಂ. 543 ರ ಸ್ಥಳವನ್ನು ಸರ್ವೇ ಮಾಡಿಕೊಡಬೇಕು. ಈ ವಿಷಯ ಕೋರ್ಟಿನಲ್ಲಿದ್ದರೂ ಕೂಡ ಇಲಾಖೆಯಿಂದ ಸರ್ವೇ ಮಾಡಿಸಲು ಯಾವುದೇ ತೊಂದರೆ ಇಲ್ಲ. ಈ ಸಂಬಂಧ ಮಾತನಾಡಲು ನಾನು ವೈ.ಕೆ. ಮೋಳೆ ಗ್ರಾಮಕ್ಕೆ ಭೇಟಿ ನೀಡುತ್ತೇನೆ ಎಂಬ ಮಾಹಿತಿ ಗೊತ್ತಾದ ಕೂಡಲೇ ಕೆಲವರು ದೂರು ನೀಡಿದ್ದರಿಂದ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹಾಗಾಗಿ ನಾನು ಪಟ್ಟಣದಲ್ಲಿ ಈ ಸಂಬಂಧ ಅಧಿಕಾರಿಗಳೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಡಾ.ಕೆ.ಎಂ. ಸಂದೇಶ್ ಹೇಳಿದರು.
ಒಂದು ವೇಳೆ ಈ ತಿಂಗಳ ಅಂತ್ಯದ ವರೆಗೆ ಈ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಜೂ. 15 ರಂದು ಪಟ್ಟಣದಿಂದ 25 ಸಾವಿರ ಜನರೊಂದಿಗೆ ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಕಾಲ್ನಡಿಗೆಯಲ್ಲಿ ಸಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಕೃಷ್ಣಯ್ಯ, ಕೃಷ್ಣಮೂರ್ತಿ, ಬುಲೆಟ್ ಸಿದ್ಧರಾಜು, ಆರ್. ರಂಗಸ್ವಾಮಿ, ಬಿ. ರಂಗಸ್ವಾಮಿ, ಮಂಜುನಾಥ್, ಪ್ರಸಾದ್, ಅಭಿ, ವಿಶ್ವ, ನಂಜುಂಡ ಸ್ವಾಮಿ, ಹರೀಶ್ ಸೇರಿದಂತೆ ಅನೇಕರು ಹಾಜರಿದ್ದರು.
