ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಕಾಡಂಚಿನ ರಂಗನಾಥಪುರ ಗ್ರಾಮದ ಬಳಿ ಜಮೀನಿನಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದ್ದು, ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಚಿರತೆ ಅಡ್ಡಾಡುತ್ತಿತ್ತು. ಇಲ್ಲಿರುವ ಸತೀಶ್ ಎಂಬುವರ ಜಮೀನಿನಲ್ಲಿ ನಾಯಿಯನ್ನು ಹಿಡಿದು ಅರ್ಧಂಬರ್ಧ ತಿಂದು ಹೋಗಿತ್ತು.
ಇದನ್ನು ಗಮನಿಸಿದ ಜಮೀನಿನ ಮಾಲೀಕ ಹಾಗೂ ಸುತ್ತಮುತ್ತಲಿನ ರೈತರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ದರು.
ಮಂಗಳವಾರ ಅರಣ್ಯ ಸಿಬ್ಬಂಧಿ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಿ ನಾಯಿ ಕಳೇಬರವನ್ನು ಸತೀಶ್ ಅವರ ಜಮೀನಿನಲ್ಲಿ ಪತ್ತೆ ಹಚ್ಚಿ ಇಲ್ಲೇ ಬೋನನ್ನು ಇರಿಸಿದ್ದರು.
ಬುಧವಾರ ಮುಂಜಾನೆ ಇದನ್ನು ತಿನ್ನಲು ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಜಮೀನಿಗೆ ತೆರಳಿದ ರೈತ ಸತೀಶ್ ತಮ್ಮ ಜಮೀನಿನಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಬಂಧಿಯಾಗಿರುವ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂಧಿ ಚಿರತೆಯನ್ನು ಹಿಡಿದು ತೆರಳಿದ್ದಾರೆ.
ಆರ್ಎಫ್ಒ ಸತೀಶ್ ಈ ಬಗ್ಗೆ ಮಾಹಿತಿ ನೀಡಿ ಇದು ಹೆಣ್ಣು ಚಿರತೆ, ಬೋನಿನಲ್ಲಿ ಜನರನ್ನು ಕಂಡು ಎಗರಿದ್ದರಿಂದ ಚಿರತೆಗೆ ತರಚಿದ ಗಾಯವಾಗಿದೆ. ಸೂಕ್ತ ಚಿಕಿತ್ಸೆ ನೀಡಿ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಬೇರೆಡೆ ಸ್ಥಳಾಂತರಿಸಲು ಅಥವಾ ಅರಣ್ಯಕ್ಕೆ ಬಿಡಲಾಗುವುದು ಎಂದು ತಿಳಿಸಿದರು.
