ಕುಶಾಲನಗರ: ಕೊಡಗು ಜಿಲ್ಲೆ, ಕುಶಾಲನಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ದುಬಾರೆ ಆನೆ ಶಿಬಿರದಲ್ಲಿ ಎಲಿಫೆಂಟ್ ಬಾತಿಂಗ್ ವೇಳೆ ಅವಘಡ ಸಂಭವಿಸಿದೆ.
ಪ್ರವಾಸಿಗರು ನೀರಿನಲ್ಲಿ ಚಿನ್ನಾಟವಾಡುತ್ತಿದ್ದರು,ಆಗ ಎಲಿಫೆಂಟ್ ಬಾತಿಂಗ್ ವೇಳೆ ಕೋಪಗೊಂಡ ಒಂದು ಆನೆ ಮತ್ತೊಂದು ಆನೆ ಮೇಲೆ ದಾಳಿನಡೆಸಿದೆ.ಆ
ಸಂದರ್ಭದಲ್ಲಿ ಚೆನ್ನೈ ಮೂಲದ ಮಹಿಳೆಯೊಬ್ಬರು ದುರಂತದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಮೃತ ಮಹಿಳೆಯನ್ನು ಚೆನ್ನೈ ನಿವಾಸಿ ಜಿನ್ಯು (33) ಎಂದು ಗುರುತಿಸಲಾಗಿದೆ. ಕುಟುಂಬದೊಂದಿಗೆ ದುಬಾರೆಗೆ ಆಗಮಿಸಿದ್ದ ಜಿನ್ಯು ಅವರು ಕಾವೇರಿ ನದಿಯಲ್ಲಿ ನಡೆಯುವ ಎಲಿಫೆಂಟ್ ಬಾತಿಂಗ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಆಕಸ್ಮಿಕವಾಗಿ ಸಂಭವಿಸಿದ ದುರ್ಘಟನೆಯಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ದುಬಾರೆ ಆನೆ ಶಿಬಿರದಲ್ಲಿ ಪ್ರವಾಸಿಗರಿಗೆ ಎಲಿಫೆಂಟ್ ಬಾತಿಂಗ್, ಆನೆ ಸವಾರಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.ಆನೆ ಘೀಳಿಟ್ಟು ದಾಳಿಗೆ ಮುಂದಾದ ಕೂಡಲೇ ಬಹಳಷ್ಟು ಪ್ರವಾಸಿಗರು ಭಯದಿಂದ ಅಡ್ಡಾದಿಡ್ಡಿ ಓಡಿದರು.
ಘಟನೆ ಬಳಿಕ ಶಿಬಿರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರವಾಸಿಗರ ಸುರಕ್ಷತೆ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳುವ ಅತ್ಯಗತ್ಯವಿದೆ.
