ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಸೋಲನುಭವಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರ ಉತ್ಸಾಹ ಮೇರೆ ಮೀರಿತ್ತು.
ಶಾಸಕ ಜಿ.ಟಿ.ದೇವೇಗೌಡರ ಅನುಪಸ್ಥಿತಿಯಲ್ಲೇ ಬೋಗಾದಿ ರಿಂಗ್ ರಸ್ತೆಯ ಬ್ಯಾಂಕರ್ಸ್ ಲೇಔಟ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರು ಅತ್ಯಂತ ಉತ್ಸಾಹ ದಿಂದ ಪಾಲ್ಗೊಂಡು ಜೆಡಿಎಸ್ ನಾಯಕರಿಗೆ ಭಾರೀ ಬೆಂಬಲ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪೆಟ್ರೋಲ್-ಡೀಸೆಲ್ ಬೆಲೆ ಮಾತಾಡುವ ಕಾಂಗ್ರೆಸ್, ಮೂರು ವರ್ಷದಲ್ಲಿ ವಿದ್ಯುತ್, ಮದ್ಯ, ಬಸ್, ನೋಂದಣಿ ತೆರಿಗೆ ಏರಿಸಿದ್ದರ ಪಟ್ಟಿ ತೆಗೆಯುವಂತೆ ಆಗ್ರಹಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಕುಮಾರಸ್ವಾಮಿ ಸಿಎಂ ಆಗಬೇಕೆಂಬುದು ನಾಡಿನ ಜನರ ಆಸೆಯಾಗಿದೆ,ಅದಕ್ಕೆ ಚಾಮುಂಡೇಶ್ವರಿಯಿಂದಲೇ ಶಕ್ತಿ ಆರಂಭವಾಗಲಿದೆ ಎಂದು ಹೇಳಿದರು.
ಶಾಸಕ ಜಿ.ಡಿ.ಹರೀಶ್ಗೌಡ ಅವರು, 2028ಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಖಚಿತ. ತಾಯಿ ಚಾಮುಂಡಿ ಆಶೀರ್ವಾದದಿಂದ ಎಚ್ಡಿಕೆ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದರು.
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ತರುವ ತನಕ ವಿರಮಿಸುವುದಿಲ್ಲ,ಎರಡಂಕಿ ದಾಟಲ್ಲ ಎಂಬ ಸವಾಲು ಸ್ವೀಕರಿಸಿದ್ದೇವೆ.ರಾಜ್ಯಾದ್ಯಂತ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದೇ ತರುತ್ತೇವೆ ಎಂದು ವಾಗ್ದಾನ ಮಾಡಿದರು.
ಸಮಾವೇಶದಲ್ಲಿ ಯಾವುದಕ್ಕೂ ಹೆದರಬೇಡಿ, ನಾವು ನಿಮ್ಮೊಂದಿಗಿದ್ದೇವೆ ಎಂಬ ಸಂದೇಶವನ್ನು ಜೆಡಿಎಸ್ ನಾಯಕರು ಕ್ಷೇತ್ರದ ಮುಖಂಡರು, ಕಾರ್ಯಕರ್ತರಿಗೆ ನೀಡಿ ಹುರಿದುಂಬಿಸಿದರು.
