ಮೈಸೂರು: ಮೈಸೂರಿನ ಸಾಹಸಪ್ರಿಯ ರೈಡರ್ ನಾಗಾರ್ಜುನ ಅನಂತ ಭಗವಾನ್ ಅವರ ಐತಿಹಾಸಿಕ ಮೈಸೂರು ಟು ಲಂಡನ್ ಬೈಕ್ ಯಾತ್ರೆಗೆ ಭಾನುವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಗರದಲ್ಲಿ ಯಾತ್ರೆಗೆ ಹಸಿರು ನಿಶಾನೆ ತೋರಿ,ನಾಗಾರ್ಜುನ ಅವರಿಗೆ ಶುಭ ಹಾರೈಸಿದರು.
(KTM Adventure 390) ಬೈಕ್ನಲ್ಲಿ ನಾಗಾರ್ಜುನ ಅವರು ಸುಮಾರು 20,000 ಕಿ.ಮೀ ದೂರವನ್ನು 60ಕ್ಕೂ ಹೆಚ್ಚು ದಿನಗಳಲ್ಲಿ ಕ್ರಮಿಸಲಿದ್ದಾರೆ.
ಫೆಲೊಶಿಪ್ ಬಿಯಾಂಡ್ ಬಾರ್ಡರ್ಸ್ ಘೋಷ ವಾಕ್ಯದೊಂದಿಗೆ ಆರಂಭವಾದ ಈ ಯಾತ್ರೆ ಭಾರತ, ನೇಪಾಳ, ಚೀನಾ, ಕಝಕಿಸ್ತಾನ್, ರಷ್ಯಾ, ಯುರೋಪಿನ ಹಲವು ದೇಶಗಳನ್ನು ದಾಟಿ ಲಂಡನ್ ತಲುಪಲಿದೆ.
ಈ ವೇಳೆ ಮಾತನಾಡಿದ ನಾಗಾರ್ಜುನ ಅವರು, ಇದು ಕೇವಲ ಬೈಕ್ ಸವಾರಿ ಅಲ್ಲ. ಗಡಿಗಳನ್ನು ಮೀರಿ ಜನರನ್ನು, ಸಂಸ್ಕೃತಿಗಳನ್ನು ಬೆಸೆಯುವ ಪ್ರಯತ್ನ ಎಂದು ಹೇಳಿದರು.
ಯುವಕರಿಗೆ ಕನಸು ಕಾಣಲು ಪ್ರೇರಣೆ ನೀಡುವುದೇ ನನ್ನ ಉದ್ದೇಶ ಎಂದು ಅವರು ತಿಳಿಸಿದರು.
ಮೈಸೂರಿನ ಹೆಸರನ್ನು ಜಾಗತಿಕ ಸಾಹಸ ನಕ್ಷೆಯಲ್ಲಿ ಗುರುತಿಸುವ ಈ ಯಾತ್ರೆ ಬೈಕ್ ಪ್ರೇಮಿಗಳು ಮತ್ತು ಜನರ ಗಮನ ಸೆಳೆದಿದೆ.
