ಎಚ್.ಡಿ.ಕೋಟೆ: ಬಿಸಿಲ ಝಳ ಸಹಿಸಲಾಗದೆ ನೂರಾರು ವನ್ಯಪ್ರಾಣಿಗಳು ಹಿಂಡು ಹಿಂಡಾಗಿ ಕಬಿನಿ ಹಿನ್ನೀರಿಗೆ ಬರುತ್ತಿದ್ದು ಈ ತಂಪಗಿನ ತಾಣದಲ್ಲಿ ವಿಹರಿಸುತ್ತಿವೆ, ಈ ದೃಶ್ಯ ಕಣ್ತುಂಬಿಕೊಂಡ ಪ್ರವಾಸಿಗರು ಖುಷಿ ಪಡುತ್ತಿದ್ದಾರೆ.
ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಉಷ್ಣಾಂಶ ಏರಿಕೆಯಾಗಿದ್ದು, ಕಬಿನಿ ಜಲಾಶಯದ ನೀರಿನ ಮಟ್ಟವೂ ದಿನೇ ದಿನೇ ಇಳಿಯುತ್ತಿದೆ.ಆದರೂ ಹಿನ್ನೀರಿನ ಗುಂಡ್ರೆ, ಗುಂಡತ್ತೂರು ಹಾಗೂ ಉದ್ದೂರು ಗೇಟ್ ಭಾಗದಲ್ಲಿ ಹಸಿರು ಹುಲ್ಲು, ತಂಪಾದ ವಾತಾವರಣ ಇರುವುದರಿಂದ ಆನೆ, ಜಿಂಕೆ, ಕಡವೆ, ಸಾಂಬಾರ್,ನವಿಲು ಹಿಂಡು ಮಧ್ಯಾಹ್ನ ಮತ್ತು ಸಂಜೆ ವೇಳೆ ನೀರು-ಮೇವಿಗಾಗಿ ಇಲ್ಲಿಗೆ ಬರುತ್ತಿವೆ.
ಕತ್ತಲಾಗುತ್ತಿದ್ದಂತೆ ಪ್ರಾಣಿಗಳು ಮತ್ತೆ ಕಾಡಿನತ್ತ ಮರಳುತ್ತವೆ. ಇವುಗಳ ಜೊತೆಗೆ ನೀರು ನಾಯಿ, ಮೊಸಳೆಗಳೂ ದಡಕ್ಕೆ ಬಂದು ಬಿಸಿಲು ಕಾಯಿಸಿ ನೀರಿಗೆ ಇಳಿಯುವ ದೃಶ್ಯ ಸಾಮಾನ್ಯವಾಗಿದೆ.
ಈ ವರ್ಷ ಬಿಸಿಲಿನ ತೀವ್ರತೆ ಹೆಚ್ಚಾದ ಕಾರಣ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ವನ್ಯಜೀವಿಗಳು ಹಿನ್ನೀರಿಗೆ ಬರುತ್ತಿವೆ. ಇವುಗಳನ್ನು ನೋಡಲು ಸಂಜೆ ವೇಳೆ ನೂರಾರು ಜನರು ಆಗಮಿಸುತ್ತಿದ್ದಾರೆ. ಕೆಲವರು ಬೋಟಿನಲ್ಲಿ ಹಿನ್ನೀರಿಗೆ ತೆರಳಿ ಹತ್ತಿರದಿಂದ ವೀಕ್ಷಿಸಿದರೆ, ಇನ್ನು ಕೆಲವರು ದಡದಲ್ಲೇ ನಿಂತು ಆನಂದಿಸುತ್ತಿದ್ದಾರೆ.
ಗುಂಡ್ರೆ ಹಾಗೂ ಕಾಕನಕೋಟೆ ಅರಣ್ಯ ಭಾಗದ ಹಿನ್ನೀರಿನಲ್ಲಿ ಪ್ರಾಣಿಗಳು ದೂರದಿಂದಲೇ ಕಾಣಸಿಗುತ್ತವೆ. ಆದರೆ ಅರಣ್ಯ ಇಲಾಖೆ ಮತ್ತು ಜಂಗಲ್ ಲಾಡ್ಜ್ನ ಬೋಟುಗಳ ಮೂಲಕ ಮಾತ್ರ ಹತ್ತಿರದಿಂದ ನೋಡಲು ಅವಕಾಶವಿದೆ.
ಮುಂಗಾರು ಆರಂಭವಾಗಿ ಕಾಡಿನ ಕೆರೆಕಟ್ಟೆಗಳು ತುಂಬಿ, ಗಿಡಮರಗಳು ಚಿಗುರೊಡೆದ ಬಳಿಕ ವನ್ಯಪ್ರಾಣಿಗಳು ಮತ್ತೆ ಕಾಡಿನೊಳಗೆ ಹೋಗಿಬಿಡುತ್ತವೆ. ಅಲ್ಲಿಯವರೆಗೆ ಕಬಿನಿ ಹಿನ್ನೀರಿನಲ್ಲಿ ಈ ಅಪರೂಪದ ದೃಶ್ಯ ಪ್ರವಾಸಿಗರಿಗೆ ಮದ ನೀಡಲಿದೆ.
