ಮೈಸೂರು: ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ (KSAPCC) ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಎಂಪ್ರಿ ಸಂಸ್ಥೆಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು.
ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಕೆ.ಬಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ವಿಶ್ವ ಸಂಸ್ಥೆಯ 13ನೇ ಸುಸ್ಥಿರ ಅಭಿವೃದ್ಧಿ ಗುರಿ ‘ಹವಾಮಾನ ಕ್ರಮ’ ಮಹತ್ವದ್ದು. ಎಂಪ್ರಿ ನಿಗದಿಪಡಿಸಿರುವ ಕೆಪಿಐಗಳನ್ನು 2025-2030ರ ಅವಧಿಯಲ್ಲಿ ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲಾ ಇಲಾಖೆಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಎಂಪ್ರಿ ಸಂಶೋಧನಾ ವಿಜ್ಞಾನಿ ಡಾ. ಶೃತಿ ಅವರು ಕೆಎಸ್ಎಪಿಸಿಸಿ ಕಾರ್ಯನೀತಿ, ವಿವಿಧ ಇಲಾಖೆಗಳ ಪಾತ್ರ, ಅಲ್ಪಾವಧಿ ಹವಾಮಾನ ಮಾಲಿನ್ಯಕಾರಕಗಳ ಪರಿಣಾಮ ಮತ್ತು ಜಿಲ್ಲಾ ಮಟ್ಟದ ದತ್ತಾಂಶ ಕುರಿತು ವಿವರಿಸಿದರು.
ಜಲ ಸಂಪನ್ಮೂಲ ತಜ್ಞ ತೇಜು ಕುಮಾರ್ ಎನ್ ಜಲ ವಲಯದ ಕ್ರಿಯಾ ಯೋಜನೆ ಬಗ್ಗೆ ಮಾಹಿತಿ ನೀಡಿದರು. NRDMS ಅಧಿಕಾರಿ ವಿನೋದ್ ಅವರು ದತ್ತಾಂಶ ಬಳಕೆ ಬಗ್ಗೆ ತಿಳಿಸಿದರು.
ಎಂಪ್ರಿ ಸಂಸ್ಥೆ ಅರಣ್ಯ, ಪರಿಸರ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2024ರಲ್ಲಿ ಕೇಂದ್ರದಿಂದ ಅನುಮೋದನೆ ಪಡೆದ ಕೆಎಸ್ಎಪಿಸಿಸಿ ಯೋಜನೆಯಡಿ 2025-26ರಲ್ಲಿ 22 ಜಿಲ್ಲೆಗಳಲ್ಲಿ ತರಬೇತಿ ಪೂರ್ಣಗೊಳಿಸಿ, 2026-27ರಲ್ಲಿ ಎಲ್ಲಾ 31 ಜಿಲ್ಲೆಗಳಿಗೆ ವಿಸ್ತರಿಸುತ್ತಿದೆ. ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಎಂಪ್ರಿ ತರಬೇತಿ ಸಹಾಯಕರಾದ ರಾಘವೇಂದ್ರ ಎನ್. ಮತ್ತು ಶೈಲೇಶ್ ಹಾಜರಿದ್ದರು.
