ಮೈಸೂರು: ಮುಂಗಾರು ಅವಧಿಯಲ್ಲಿ ಉಂಟಾಗಬಹುದಾದ ವಿದ್ಯುತ್ ವ್ಯತ್ಯಯ ಹಾಗೂ ತುರ್ತು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸೆಸ್ಕ್ ಸನ್ನದ್ಧವಾಗಿರಬೇಕು ಎಂದು ಸೆಸ್ಕ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ನಿತೇಶ್ ಪಾಟೀಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮೈಸೂರಿನ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ಮುಂಗಾರು ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸೆಸ್ಕ್ ವ್ಯಾಪ್ತಿಯ ಐದು ಜಿಲ್ಲೆಗಳ ಉಪ ವಿಭಾಗಗಳ ದೂರುಗಳ ನಿರ್ವಹಣೆ, ವಿದ್ಯುತ್ ಅಡಚಣೆ, ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಹಾಗೂ ಅಗತ್ಯ ಸಾಮಗ್ರಿಗಳ ಸಂಗ್ರಹ ಕುರಿತು ಸಮಗ್ರ ಮಾಹಿತಿ ಪಡೆದರು.
ಸಂಪರ್ಕ ಸಂಖ್ಯೆ ಸಕ್ರಿಯವಾಗಿರಲಿ:
ಮುಂಗಾರು ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಸೆಸ್ಕ್ ಸನ್ನದ್ಧವಾಗಿದೆ ಎಂಬ ವಿಶ್ವಾಸ ಜನರಲ್ಲಿ ಮೂಡಬೇಕು. ಗ್ರಾಹಕರಿಗೆ ತ್ವರಿತವಾಗಿ ಸ್ಪಂದನೆ ನೀಡುವುದು ಅತ್ಯಂತ ಮುಖ್ಯ. ಹೀಗಾಗಿ ಸೆಸ್ಕ್ ಟೋಲ್ ಫ್ರೀ ಹಾಗೂ ಸಾರ್ವಜನಿಕ ಸಂಪರ್ಕ ಸಂಖ್ಯೆಗಳು ನಿರಂತರವಾಗಿ ಕಾರ್ಯನಿರ್ವಹಿಸಬೇಕು. ನಿಷ್ಕ್ರಿಯವಾಗಿರುವ ಸಂಪರ್ಕ ಸಂಖ್ಯೆಗಳನ್ನು ತಕ್ಷಣ ಸಕ್ರಿಯಗೊಳಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪದೇ ಪದೇ ಬೇಡಿಕೆ ಇಡುವುದಕ್ಕಿಂತ ಅಗತ್ಯವಿರುವಷ್ಟು ಸಾಮಗ್ರಿಗಳನ್ನು ಈಗಲೇ ಪೂರೈಕೆ ಮಾಡಿಕೊಳ್ಳಿ ಎಂದು ಸೂಚಿಸಿದರು.
ಎಲ್ಲಾ ವಿಭಾಗಗಳಿಗೂ ಶೀಘ್ರ ಸಾಮಗ್ರಿಗಳು ತಲುಪಬೇಕು, ಮುಂಗಾರು ಅವಧಿಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಕನಿಷ್ಠ ಎರಡು ತಿಂಗಳಿಗೆ ಅಗತ್ಯವಾಗುವಷ್ಟು ಕಂಬಗಳು ಹಾಗೂ ಇತರೆ ಮೆಟೀರಿಯಲ್ಸ್ಗಳನ್ನು ಈಗಲೇ ಪೂರೈಕೆ ಮಾಡಿ ಎಂದು ನಿಗಮ ಕಚೇರಿ ಅಧಿಕಾರಿಗಳಿಗೆ ಸೂಚಿಸಿದರು.
ಮುಂಗಾರು ಸಂದರ್ಭದಲ್ಲಿ ಎಸ್ಒಪಿ ಪ್ರಕಾರ ಕೆಲಸ ನಿರ್ವಹಿಸದ ಗುತ್ತಿಗೆದಾರರಿಗೆ ನೋಟೀಸ್ ನೀಡಿ. ಮಳೆಗಾಲದಲ್ಲಿ ಸಮಯಕ್ಕೆ ಸರಿಯಾಗಿ ಹಾಗೂ ಗುಣಮಟ್ಟದ ಕೆಲಸ ಮಾಡುವ ಗುತ್ತಿಗೆದಾರರಿಗೆ ಹೆಚ್ಚಿನ ಕೆಲಸ ನೀಡಿ. ಕೆಲಸದಲ್ಲಿ ನಿರ್ಲಕ್ಷ್ಯ ತೋರಿಸುವವರಿಗೆ ಕಡಿಮೆ ಕೆಲಸ ನೀಡಬೇಕು. ಮುಂಗಾರು ವೇಳೆ ಕೆಲಸದಲ್ಲಿ ವಿಳಂಬ ಮಾಡಿದರೆ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದು ನಿತೇಶ್ ಪಾಟೀಲ್ ಎಚ್ಚರಿಸಿದರು.
ಸಭೆಯಲ್ಲಿ ತಾಂತ್ರಿಕ ನಿರ್ದೇಶಕಿ ಶರಣಮ್ಮ ಎಸ್. ಜಂಗಿನ, ಮುಖ್ಯ ಪ್ರಧಾನ ವ್ಯವಸ್ಥಾಪಕಿ ಲಿಂಗರಾಜಮ್ಮ, ಮುಖ್ಯ ಇಂಜಿನಿಯರ್ ಎಲ್. ಲೋಕೇಶ್, ಅಧೀಕ್ಷಕ ಇಂಜಿನಿಯರ್ಗಳಾದ ಸುನೀಲ್ ಕುಮಾರ್, ಸೋಮಶೇಖರ್, ಪ್ರಧಾನ ವ್ಯವಸ್ಥಾಪಕರಾದ ಡಾ.ಬಿ.ಆರ್. ರೂಪ, ಆರ್. ರಾಮಸ್ವಾಮಿ, ಎಚ್.ಆರ್. ದಿನೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
