ಹನೂರು: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ಮುಖ್ಯಸ್ಥ, ನಟ ಸಿ.ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಹನೂರಿನಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ನಟ ವಿಜಯ್ ಅವರ ಅಭಿಮಾನಿ ಅಡುಗೆ ತಯಾರಕರಾದ ನಾಗರಾಜು ಅವರು ಮಾತನಾಡಿ, ಕಳೆದ ತಿಂಗಳು ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ 108 ಸ್ಥಾನಗಳನ್ನು ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಮುಖ್ಯಮಂತ್ರಿ ಆಗಲು ಬಹುಮತದ ಕೊರತೆ ಇತ್ತು,ಕಡೆಗೂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ ಮುಂದಿನ ದಿನಗಳಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಿ ಸಿನಿಮಾರಂಗದಲ್ಲಿ ಜನ ಮನ್ನಣೆ ಗಳಿಸಿದಂತೆ ರಾಜಕೀಯದಲ್ಲಿಯೂ ಜನ ನಾಯಕರಾಗಿ ದೇಶದಲ್ಲಿಯೇ ಮಾದರಿ ಸಿಎಂ ಆಗಲಿ ಎಂದು ಶುಭ ಕೋರಿದರು.
ಹೂವಿನ ಅಂಗಡಿ ಮಾಲೀಕ ಮಹೇಶ್ ಮಾತನಾಡಿ ಚುನಾವಣಾ ಪ್ರಣಾಳಿಕೆಯಲ್ಲಿ ನಟ ವಿಜಯ್ ಅವರು ರಾಜ್ಯದ ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜನಪರ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ವಿವಿಧ ಪಕ್ಷಗಳು ಅವರಿಗೆ ಬೆಂಬಲವಾಗಿ ನಿಂತು ಸಹಕಾರ ನೀಡಿದ್ದಾರೆ. ರಾಜ್ಯದ ಜನರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಮುಂದುವರಿಸಲಿ ಎಂದು ಹಾರೈಸಿದರು.
ನಟ ವಿಜಯ್ ಅಭಿಮಾನಿಗಳಾದ ಗಂಗಾಧರ್, ಬಸವೇಗೌಡ, ಮಹೇಶ್, ಚೇತನ್, ವಿಶ್ವ ಸೇರಿದಂತೆ ಅನೇಕ ಅಭಿಮಾನಿಗಳು ಹಾಜರಿದ್ದರು.
