ಇಸ್ಲಾಮಾಬಾದ್: ವಾಯುವ್ಯ ಪಾಕಿಸ್ತಾನದ ಪೊಲೀಸ್ ಚೆಕ್ಪಾಯಿಂಟ್ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 21 ಸೈನಿಕರು ಸಾವನ್ನಪ್ಪಿದ್ದಾರೆ.
ಬಹಳಷ್ಟು ಜನ ಗಾಯಗೊಂಡಿದ್ದಾರೆ. ದಾಳಿಕೋರರು ಮೊದಲು ಪೊಲೀಸ್ ಚೆಕ್ಪಾಯಿಂಟ್ನಲ್ಲಿ ಕಾರ್ ಬಾಂಬ್ ಸ್ಫೋಟಿಸಿ, ನಂತರ ಭಾರೀ ಗುಂಡು ಹಾರಿಸಿದ್ದಾರೆ.
ಹಾಗಾಗಿ ಪೊಲೀಸರಿಗೆ ಪ್ರತೀಕಾರ ತೀರಿಸಿಕೊಳ್ಳಲು ಸಮಯವಿಲ್ಲದಂತಾಗಿದೆ. ದಾಳಿ ಮಾಡಿ ನಂತರ ದಾಳಿಕೋರರು ಪೊಲೀಸರ ಶಸ್ತ್ರಾಸ್ತ್ರಗಳನ್ನೂ ದೋಚಿ ಪರಾರಿಯಾಗಿದ್ದಾರೆ.
ಇತ್ತೇಹಾದ್-ಉಲ್-ಮುಜಾಹಿದ್ದೀನ್ ಪಾಕಿಸ್ತಾನ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಖೈಬರ್ ಪಖ್ತುಂಖ್ವಾದ ಜಿಲ್ಲೆಯ ಬನ್ನು ಎಂಬಲ್ಲಿ ಶನಿವಾರ ತಡರಾತ್ರಿ ಈ ದಾಳಿ ನಡೆದಿದೆ.
ಬನ್ನು ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನಿ ಜಿಲ್ಲೆಯಾಗಿದೆ. ದಾಳಿಕೋರರು ತಮ್ಮ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ನಂತರ ಗಡಿಯನ್ನು ದಾಟಿ ಅಫ್ಘಾನಿಸ್ತಾನಕ್ಕೆ ಪಲಾಯನ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಸ್ಫೋಟಕಗಳಿಂದ ತುಂಬಿದ ವಾಹನವು ಪೊಲೀಸ್ ತಪಾಸಣಾ ಕೇಂದ್ರದ ಮೇಲೆ ದಾಳಿ ಮಾಡಿದೆ. ಕಟ್ಟಡದ ಬಹುಭಾಗವನ್ನು ನಾಶಪಡಿಸಿದ ಪ್ರಬಲ ಸ್ಫೋಟದ ನಂತರ, ಪೊಲೀಸ್ ತಪಾಸಣಾ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಕನಿಷ್ಠ 21 ಸೈನಿಕರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಮೂವರು ಆಸ್ಪತ್ರೆಯಲ್ಲಿದ್ದಾರೆ.
