ಮದ್ದೂರು: ಜಾಗತಿಕ ತಾಪಮಾನ ಏರಿಕೆಗೆ ವೃಕ್ಷ ಸಂವರ್ಧನೆ, ಸಂರಕ್ಷಣೆ ಮಾರ್ಗವಾಗಿದ್ದು, ಹಸಿರು ಹೊದಿಕೆ ಹೆಚ್ಚಿಸುವಂತೆ ಮತ್ತು ಮಂಡ್ಯ ನಗರದ ರಸ್ತೆ ಬದಿಯ ಮರಗಳ ಸಮೀಕ್ಷೆ ನಡೆಸುವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
ಮದ್ದೂರಿನಲ್ಲಿ ಜಿಲ್ಲಾ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಂಡ್ಯದ ೭ ವಲಯಗಳಲ್ಲಿರುವ ನರ್ಸರಿಗಳಲ್ಲಿ ತೇಗ, ಶ್ರೀಗಂಧ, ಹೊನ್ನೆ ಇತ್ಯಾದಿ ಗುಣಮಟ್ಟದ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸುವಂತೆ ಮತ್ತು ವಿತರಿಸಿದ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಬಗ್ಗೆ ಸಮೀಕ್ಷೆ ನಡೆಸುವಂತೆ ಸಲಹೆ ನೀಡಿದರು.
ಜಿಲ್ಲೆಯ ಹಲವೆಡೆ ಚಿರತೆಗಳ ಸಮಸ್ಯೆ ಪರಿಹಾರಕ್ಕೆ ತಕ್ಷಣವೇ ಕ್ರಮ ವಹಿಸುವಂತೆ ತಿಳಿಸಿದ ಅವರು, ಕಾಡಿನಂಚಿನ ಗ್ರಾಮದ ಜನರೊಂದಿಗೆ ಸೌಹಾರ್ಧ ಸಂಬಂಧ ಬೆಳೆಸಿಕೊಂಡರೆ, ಕಾಡ್ಗಿಚ್ಚು, ಕಳ್ಳಬೇಟೆ, ಅಕ್ರಮ ಮರ ಕಡಿತಲೆಯಂತಹ ಅಪರಾಧಗಳ ಬಗ್ಗೆ ತಕ್ಷಣದ ಮಾಹಿತಿ ಲಭಿಸುತ್ತದೆ. ವನ ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.
ಅರಣ್ಯ, ಕಾಡಿನಂಚಿನಲ್ಲಿರುವ ಪಟ್ಟಾ ಜಮೀನು, ಸರ್ಕಾರಿ ಜಾಗದಲ್ಲಿ ಬೆಳೆದಿರುವ ಶ್ರೀಗಂಧ, ರಕ್ತ ಚಂದನ, ಬೀಟೆ ಮತ್ತು ತೇಗದ ಮರಗಳ ಜಿಯೋ ಟ್ಯಾಗ್ ಮಾಡುವ ಮೂಲಕ ಯಾವುದೇ ಬೆಲೆ ಬಾಳುವ ವೃಕ್ಷ ಕಳುವಾಗದಂತೆ ಸಂರಕ್ಷಿಸಲು ಅರಣ್ಯ ಸಚಿವರು ಸೂಚಿಸಿದರು.
ಮಂಡ್ಯ ನಗರದಲ್ಲಿ ಮನೆಯ ಮುಂದೆ, ರಸ್ತೆ ಬದಿಯಲ್ಲಿ ಬೆಳೆದ ಮರಗಳನ್ನು ಅಕ್ರಮವಾಗಿ ಕಡಿಯಲಾಗುತ್ತಿದೆ ಎಂಬ ಆರೋಪಗಳಿದ್ದು, ಮರಗಳ ಗಣತಿ ನಡೆಸಲು ಮತ್ತು ಅಕ್ರಮವಾಗಿ ಮರ ಕಡಿತಲೆ ಆಗದಂತೆ ಕ್ರಮ ವಹಿಸಿ ಎಂದು ಖಂಡ್ರೆ ಹೇಳಿದರು.
ಜಿಲ್ಲೆಯಲ್ಲಿ ಕರ್ನಾಟಕ ಅರಣ್ಯ ಕಾಯಿದೆ ಅಡಿ ಸೆಕ್ಷನ್ ೪ರ ಪ್ರಾಥಮಿಕ ಅಧಿಸೂಚನೆ ಆಗಿ ವರ್ಷಗಳೇ ಕಳೆದಿದ್ದರೂ ಸೆಕ್ಷನ್ ೧೭ರ ಅಡಿಯಲ್ಲಿ ಅರಣ್ಯ ಎಂದು ಘೋಷಣೆ ಆಗಿಲ್ಲ. ಎಲ್ಲೆಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿ (ಎಫ್ಎಸ್ಒ) ಇಲ್ಲವೋ ಅಲ್ಲಿಗೆ ಪ್ರಸ್ತಾವನೆ ಸಲ್ಲಿಸಿದರೆ ಅಧಿಕಾರಿಗಳನ್ನು ನೇಮಕ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು, ಪ್ರಭುಗೌಡ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
