ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಏ.14 ರಂದೇ ಬಾಬಾ ಸಾಹೇಬರ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾಕಿ ಅಪಮಾನ ಗೊಳಿಸಿರುವುದನ್ನು ನಂಜನಗೂಡು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಖಂಡಿಸಿದ್ದಾರೆ.
ಮೖಸೂರು ಜಿಲ್ಲೆ, ವರುಣ ಹೋಬಳಿಗೆ ಸೇರಿದ ಮರಿಗೌಡನಹುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೇ ಶುಕ್ರವಾರ ನಂಜನಗೂಡು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ನಿಯೋಗ ಗ್ರಾಮಕ್ಕೆ ಭೇಟಿ ನೀಡಿ ಘಟನೆಯನ್ನು ಖಂಡಿಸಿತು.
ದಲಿತ ಸಂಘರ್ಷ ಸಮಿತಿ ಮೈಸೂರು ಉಪ ವಿಭಾಗೀಯ ಸಂಚಾಲಕರಾದ
ಮಂಜುಶಂಕರಪುರ ಅವರ ನೇತೃತ್ವದಲ್ಲಿ ನಂಜನಗೂಡು ತಾಲ್ಲೂಕು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಘಟನಾ ಸಂಚಾಲಕರುಗಳಾದ ಸುರೇಶ್ ಸಿದ್ದೇಗೌಡನ ಹುಂಡಿ,ಎಂ ಮಹೇಶ್ ತಗಡೂರು, ಹೊಳೆಯಪ್ಪ ಏಚಗಳ್ಳಿ ಗಜೇಂದ್ರ ಗೋಣಹಳ್ಳಿ, ಎಂ ಮಹೇಶ್ ಗಟ್ಟವಾಡಿಪುರ,ತಾಲ್ಲೂಕು ಖಜಾಂಚಿ ಸುರೇಶ್ ಡಿ.ಸಿ ದೇವರಸನಹಳ್ಳಿ, ದಸಂಸ ಅರ್ಜುನ್ ಬೆಳಗುಂದ ಹಾಗೂ ಹಿರಿಯ ಸಲಹೆಗಾರರಾದ ಸುರೇಶ್ ಬಿಳಿಗೆರೆ, ಸಿದ್ದರಾಜು ಮಲ್ಲಹಳ್ಳಿ, ಪದಾಧಿಕಾರಿಗಳಾದ ಸಿದ್ದರಾಜು ಹೊಸವೀಡುಹುಂಡಿ, ಮಂಜು ಅಂಚಿಪುರ ಅವರುಗಳು ಮರಿಗೌಡನ ಹುಂಡಿ ಗ್ರಾಮಕ್ಕೆ ಭೇಟಿ ನೀಡಿದರು.
ಈ ಗ್ರಾಮದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ದಲಿತ ಕುಟುಂಬಗಳಿಗೆ ಆತ್ಮಸ್ಥೖರ್ಯ ಕಳೆದು ಕೊಳ್ಳದೆ ದೖರ್ಯದಿಂದ ಇರುವಂತೆ ತಿಳಿಹೇಳಿದರು.
ಮೈಸೂರು ತಾಲ್ಲೂಕು ತಹಶೀಲ್ದಾರ್ ಮಹೇಶ್ ಕುಮಾರ್, ಮೇಗಳಪುರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಸದಾಶಿವ ತಿಪ್ಪಾರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗುಣಶೇಖರ್, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಯೋಗೇಂದ್ರ, ಗ್ರಾಮ ಲೆಕ್ಕಾಧಿಕಾರಿ ಮನು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ್ ಅವರಗಳ ಜೊತೆ ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಭಾವಚಿತ್ರಗಳಿಗೆ ಅಪಮಾನಗೊಳಿಸುವ ಕೃತ್ಯಗಳು ಹೆಚ್ಚಾಗಿದ್ದು,ಆರೋಪಿಗಳನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ನಿಯೋಗ ಒತ್ತಾಯಿಸಿತು.
ಅಪಮಾನದಂತಹ ಘಟನೆಗಳು ನಡೆದ ಸಂಧರ್ಭದಲ್ಲಿ ಜಿಲ್ಲಾ ಆಡಳಿತ ಕಠಿಣ ಕ್ರಮ ಕೖಗೊಂಡಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮರಿಗೌಡನಹುಂಡಿ ಗ್ರಾಮದಲ್ಲಿ ಘಟನೆ ನಡೆದು ಒಂದುವಾರ ಕಳೆದರೂ ಆರೋಪಿಗಳನ್ನು ಪತ್ತೆಹಚ್ಚದ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ರೀತಿಯ ಘಟನೆಗಳು ಜಿಲ್ಲೆಯಲ್ಲಿ ಮತ್ತೆ ಮರುಕಳಿಸದಂತೆ ಕ್ರಮವಹಿಸಬೇಕೆಂದು ಮೈಸೂರು ಜಿಲ್ಲಾ ಆಡಳಿತ ಮತ್ತು ತಾಲ್ಲೂಕು ಆಡಳಿತವನ್ನು ನಿಯೋಗ ಆಗ್ರಹಿಸಿತು.
ಭೇಟಿಯ ನಂತರ ನಂಜನಗೂಡು ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರು ತಾಲ್ಲೂಕು ತಹಶೀಲ್ದಾರ್ ಮಹೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮೈಸೂರು ತಾಲ್ಲೂಕು ತಹಶೀಲ್ದಾರ್ ಮಹೇಶ್ ಕುಮಾರ್ ಅವರು ಮನವಿ ಸ್ವೀಕರಿಸಿ ಮಾತನಾಡಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವವರ ವಿರುದ್ಧ ಈಗಾಗಲೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ, ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ನಾಮಫಲಕಕ್ಕೆ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಆದಷ್ಟು ಬೇಗ ಪತ್ತೆ ಮಾಡಿ ಜೈಲಿಗೆ ಕಳಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಮಂಜುಶಂಕರಪುರ ತಿಳಿಸಿದ್ದಾರೆ.
ಈ ವೇಳೆ ಮರಿಗೌಡನಹುಂಡಿ ರಾಜಶೇಖರ್ ಸೇರಿದಂತೆ ಹಲವು ಗ್ರಾಮದ ಮುಖಂಡರು ಹಾಜರಿದ್ದರು.
