ಬೆಂಗಳೂರು: ಕೃಷಿ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳು ಪ್ರತಿ ರೈತರನ್ನೂ ತಲುಪಬೇಕು. ಈ ದಿಸೆಯಲ್ಲಿ ಎಫ್ ಕೆ ಸಿಸಿಐ ಪ್ರಯತ್ನ ಉತ್ತಮವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್-2026 ಉದ್ಘಾಟಿಸಿ ಸಿಎಂ ಮಾತನಾಡಿದರು.
ಎಫ್ ಕೆ ಸಿಸಿಐ ಅಧ್ಯಕ್ಷರಾದ ಶ್ರೀಮತಿ ಉಮಾರೆಡ್ಡಿ ಅವರು ಉತ್ತಮ ವಾಣಿಜ್ಯೋದ್ಯಮಿಯಾಗಿ ನನಗೆ ಚಿರಪರಿಚಿತರು. ಕೃಷಿ ವಿವಿ ಹಾಗೂ ಎಫ್ ಕೆ ಸಿಸಿಐ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್ ರೈತರಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ರೈತರಿಗೆ ಉಪಯುಕ್ತವಾದ ಈ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಹಾಗೂ ಯಂತ್ರೋಪಕರಣಗಳ ವಸ್ತುಪ್ರದರ್ಶನ ಏರ್ಪಡಿಸಿರುವುದು ಉತ್ತಮ ಇಂತಹ ಕಾರ್ಯಕ್ರಮಗಳಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದು ಸಿಎಂ ಸಲಹೆ ನೀಡಿದರು.
ಭಾರತ ಕೃಷಿಪ್ರಧಾನ ದೇಶ,ಕೃಷಿಯನ್ನು ಸುಸ್ಥಿರಗೊಳಿಸುವುದು ಹಾಗೂ ಲಾಭದಾಯಕಗೊಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇಂದಿನ ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಲಾಭದಾಯಕವಾದರೆ ಯುವಜನತೆ ಸಹಜವಾಗಿ ಕೃಷಿಯತ್ತ ಮುಖಮಾಡುತ್ತಾರೆ. ಸರ್ಕಾರ ಕೃಷಿಯನ್ನು ಲಾಭದಾಯಕಗೊಳಿಸಲು ಹಲವು ಯೋಜನೆಗಳನ್ನು ರೂಪಿಸಿದ್ದು ಈ ಉದ್ದೇಶಕ್ಕೆ ಕೈಗಾರಿಕೆಗಳೂ ಕೈಜೋಡಿಸಬೇಕು ಎಂದು ಮುಖ್ಯ ಮಂತ್ರಿಗಳು ಕರೆ ನೀಡಿದರು.
ಮಾಹಿತಿ ತಂತ್ರಜ್ಞಾನದಲ್ಲಿ ಬೆಂಗಳೂರು ರಾಜಧಾನಿಯಾಗಿರುವಂತೆ ಕೃಷಿ ತಂತ್ರಜ್ಞಾನದಲ್ಲಿಯೂ ಬೆಂಗಳೂರು ರಾಜಧಾನಿಯಾಗಬೇಕು. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೃತಕ ಬುದ್ದಿಮತ್ತೆ ಸೇರಿದಂತೆ ಎಲ್ಲ ಕ್ಷೇತ್ರಗಳ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
