ಮೈಸೂರು: ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದ ಅಭಿವೃದ್ಧಿಶೀಲ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಬಸವನಪುರ, ಗೇರದಡ ಹಾಗೂ ಕೆಂಚನಹಳ್ಳಿ ಗ್ರಾಮಗಳ ಶ್ರೀ ಮೇಲನಕಟ್ಟೆ ಗಣಪತಿ ದೇವಾಲಯ ಲೋಕಾರ್ಪಣೆ ಹಾಗೂ ಹೊಸ ಅಗ್ರಹಾರ ಗ್ರಾಮದಲ್ಲಿನ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಗೋಪುರ ಲೋಕಾರ್ಪಣೆ ಹಾಗೂ ಶ್ರೀ ಬಸವೇಶ್ವರ ದೇವರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಭಾಷಣ ಮಾಡಿದರು.
ಮಹಿಳೆಯರಿಗೆ 2000 ರೂ ಕೊಡುತ್ತಿದ್ದಾರೆ ಎಂಬುದೇನೊ ಸರಿ. ಆದರೆ, ಆ ಮೊತ್ತವನ್ನು ರಾಜ್ಯ ಸರ್ಕಾರ ಹೇಗೆ ಕೊಡುತ್ತಿದೆ ಎಂಬುದನ್ನು ಜನರು ಗಮನವಿಟ್ಟು ನೋಡಬೇಕು. ಸಾಲ ಮಾಡಿ ತುಪ್ಪ ತಿನ್ನು ಎನ್ನುವ ಹಾಗೆ ಸರಕಾರ ಲಕ್ಷಾಂತರ ಕೋಟಿ ಸಾಲ ಮಾಡಿ ಗ್ಯಾರೆಂಟಿ ನೀಡುತ್ತಿದೆ ಎಂದು ಟೀಕಿಸಿದರು.
ಈಗಾಗಲೇ ಈ ಸರ್ಕಾರ 7 ಲಕ್ಷದ 26,000 ಕೋಟಿ ರೂಪಾಯಿ ಸಾಲ ಮಾಡಿದೆ. ಈ ಮೂಲಕ ರಾಜ್ಯದ 6.30 ಕೋಟಿ ಕನ್ನಡಿಗರ ಮೇಲೆ ಮೇಲೆ ಕನಿಷ್ಠ ಒಂದು ಲಕ್ಷ ರೂಪಾಯಿ ಸಾಲವನ್ನು ಹೊರಿಸಿದೆ ಈ ಬಗ್ಗೆ ಧೈರ್ಯವಿದ್ದರೆ ಚರ್ಚೆಗೆ ಬರಲಿ ಎಂದು ರಾಜ್ಯ ಸರ್ಕಾರಕ್ಕೆ ಹೆಚ್ ಡಿ ಕೆ ಸವಾಲು ಹಾಕಿದರು.
ಗ್ಯಾರೆಂಟಿಗಳ ಪರಿಣಾಮದಿಂದ ರಾಜ್ಯದ ಖಜಾನೆಗೆ ಖಾಲಿಯಾಗಿದೆ. ಸಕಾಲಕ್ಕೆ ಸರ್ಕಾರಿ ನೌಕರಿಗೆ ಸಂಬಳ ಕೊಡುವ ಶಕ್ತಿಯನ್ನು ಸರ್ಕಾರ ಕಳೆದುಕೊಂಡಿದೆ. ಹಾಗೆಯೇ ಗ್ಯಾರೆಂಟಿಗಳ ಆಮಿಷವೊಡ್ಡಿ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷ ಆ ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿದೆ, ಹಿಮಾಚಲ ಪ್ರದೇಶದ ಪರಿಸ್ಥಿತಿ ಕರ್ನಾಟಕಕ್ಕೂ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆಲವು ವರ್ಷಗಳ ಹಿಂದೆ ಶ್ರೀಲಂಕಾ ಪರಿಸ್ಥಿತಿ ಏನಾಗಿತ್ತು ಎಂಬುದನ್ನು ಎಲ್ಲರೂ ಗಮನಿಸಿದ್ದೇವೆ. ಇವರು ಇದೇ ರೀತಿಯಲ್ಲಿ ಆರ್ಥಿಕ ವ್ಯವಸ್ಥೆಯನ್ನು ಕಳಪೆಯಾಗಿ ನಿರ್ವಹಣೆ ಮಾಡಿದರೆ ಶ್ರೀಲಂಕಾದ ಪರಿಸ್ಥಿತಿಯೇ ಕರ್ನಾಟಕಕ್ಕೂ ಬರುವುದು ಗ್ಯಾರಂಟಿ ಎಂದು ಕೇಂದ್ರ ಸಚಿವರು ಎಚ್ಚರಿಸಿದರು.
