ಟೆಹ್ರಾನ್: ಹರ್ಮುಜ್ ಜಲಸಂಧಿ ಮತ್ತೆ ಜಾಗತಿಕ ಸಂಘರ್ಷದ ಕೇಂದ್ರಬಿಂದುವಾಗಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ನಡುವೆ, ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೂರು ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದೆ.
ಹಾಗಾಗಿ ಇಡೀ ವಿಶ್ವದಲ್ಲಿ ಮತ್ತೆ ಹೆಚ್ವು ಆತಂಕ ತಂದೊಡ್ಡಿದೆ.
ಪಶ್ಚಿಮ ಏಷ್ಯಾದ ಅತ್ಯಂತ ನಿರ್ಣಾಯಕ ಸಮುದ್ರ ಮಾರ್ಗ ಹರ್ಮುಜ್ ಜಲಸಂಧಿಯಲ್ಲಿ ಯುದ್ಧದ ಕಾರ್ಮೋಡಗಳು ದಟ್ಟವಾಗತೊಡಗಿದೆ.
ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಗನ್ಬೋಟ್ಗಳು ಮೂರು ಪ್ರತ್ಯೇಕ ವ್ಯಾಪಾರಿ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಅಂತಾರಾಷ್ಟ್ರೀಯ ಸಮುದ್ರ ಭದ್ರತೆಗೆ ಸಡ್ಡು ಹೊಡೆದಿದೆ.
ಒಮಾನ್ನ ಈಶಾನ್ಯಕ್ಕೆ ಸಂಚರಿಸುತ್ತಿದ್ದ ಲೈಬೀರಿಯನ್ ಧ್ವಜವನ್ನು ಹೊಂದಿರುವ ಹಡಗಿನ ಮೇಲೆ ದಾಳಿಯಾಗಿದೆ.
ಗುಂಡಿನ ದಾಳಿ ನಡೆದರೂ, ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡರೂ, ಮೂರೂ ಹಡಗುಗಳಲ್ಲಿರುವ ಸಿಬ್ಬಂದಿಗಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಈ ಘಟನೆ ನಡೆದಿರುವುದು ರಾಜತಾಂತ್ರಿಕ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ.
