ಮೈಸೂರು: ಅರಿವು ಸಂಸ್ಥೆ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಕೆ ಆರ್ ವನಂ ನಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ
ಮಗುವಿಗೊಂದು ಪುಸ್ತಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿವಿಧ ಸಾಹಿತಿಗಳು ಹಾಗೂ ಭಗವದ್ಗೀತೆ ಸೇರಿದಂತೆ ಇನ್ನಿತರ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ವಿತರಿಸಿ ಪುಸ್ತಕ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಈ ವೇಳೆ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ ಮಾತನಾಡಿ,ಮೊದಲಿನಂತೆ ಈಗ ಪುಸ್ತಕ ಸಂಸ್ಕೃತಿ ಇಲ್ಲವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಓದುವಂತಾಗಿದ್ದರೆ ದೇಶದ ಚಿತ್ರಣವೇ ಬದಲಾಗಿರುತ್ತಿತ್ತು, ಪುಸ್ತಕಗಳನ್ನು ಸಂಗ್ರಹಿಸುವ, ಪುಸ್ತಕ ಸಂಸ್ಕೃತಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಮೊಬೈಲ್ ಸಂಸ್ಕೃತಿಯಿಂದಾಗಿ ಸಮಸ್ಯೆಗಳು ವೃದ್ಧಿಸುತ್ತಿವೆ. ಹೆಚ್ಚು ಪುಸ್ತಕಗಳು ಹೊರಬರುತ್ತಿದ್ದರೂ ಓದುಗರ ಸಂಖ್ಯೆ ಕುಸಿಯುತ್ತಿದೆ. ಹಿಂದೆ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಪುಸ್ತಕ ಪ್ರೇಮಿಗಳು ಭಾಗವಹಿಸುತ್ತಿದ್ದರು. ಇಂದು 50 ಮಂದಿ ಬಂದರೆ ಹೆಚ್ಚು ಎಂದು ಬೇಸರ ವ್ಯಕ್ತಪಡಿಸಿದರು.
ಕೆಟ್ಟ ಸ್ನೇಹಿತರು ಇರಬಹುದು ಕೆಟ್ಟ ಪುಸ್ತಕಗಳು ನಮ್ಮ ಬಳಿ ಇರಲು ಸಾಧ್ಯವಿಲ್ಲ ಎಂದು ಸತ್ಯನಾರಾಯಣ ಹೇಳಿದರು.
ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಜೆಡಿಎಸ್ ಯುವ ಮುಖಂಡರಾದ ಗಗನ್ ಗೌಡ, ಭಾಗ್ಯಶ್ರೀ ಭಟ್, ಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.
