ಮೈಸೂರು: ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನಲ್ಲಿ ಬೇಸಿಗೆಯ ಬಿಸಿಲಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಳೆ ಕೊರತೆ, ಕೆಆರ್ಎಸ್ ಜಲಾಶಯದ ನೀರು ತಗ್ಗಿದ ಕಾರಣ ಪಟ್ಟಣ ಮತ್ತು ಗ್ರಾಮೀಣ ಭಾಗಗಳು ಸೇರಿದಂತೆ ಹಲವೆಡೆ ನೀರಿನ ಅಭಾವ ತಲೆದೋರಿ ಜನಜೀವನ ಅಸ್ತವ್ಯಸ್ತ ಆಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಸ್ಥಳಿಯ ಶಾಸಕರಾದ ಡಿ. ರವಿಶಂಕರ್ ಅವರು ಕೂಡಲೇ ಅಧಿಕಾರಿಗಳಿಗೆ ಆದೇಶ ನೀಡಿ ಪರ್ಯಾಯ ವ್ಯವಸ್ಥೆಗಳನ್ನು ಮಾಡುವಂತೆ ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯಿಸಿದ್ದಾರೆ.
ಬೇಸಿಗೆ ಹೆಚ್ಚಾದಂತೆ ಕುಡಿಯುವ ನೀರಿನ ಸಮಸ್ಯೆ ಸಹಜವಾಗಿ ಹೆಚ್ಚಾಗುತ್ತದೆ ಈಗಾಗಲೇ ಪಟ್ಟಣ ಮಟ್ಟದಲ್ಲಿ ನಾಲ್ಜೈದು ದಿನಗಳಿಗೊಮ್ಮೆ ನೀರು ಬಿಡುತ್ತಿದ್ದು ಕೆಲವೊಮ್ಮೆ ಒಂದು ವಾರಕಳೆದರು ನೀರು ಬಿಡದ ಕಾರಣ ಜನರಿಗೆ ತೀವ್ರವಾಗಿ ತೊಂದರೆ ಉಂಟಾಗಿದೆ.
ಶಾಸಕರಾದ ಡಿ, ರವಿಶಂಕರ್ ಅವರು ಈಗಾಗಲೇ ಹಳೆ ಎಡತೊರೆಯ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಶಾಸಕರು ಶೀಘ್ರ ಕ್ರಮ ಕೈಗೊಂಡು ಟ್ಯಾಂಕರ್ ಗಳ ಮೂಲಕ ಮನೆಗಳಿಗೆ ನೀರು ಪೂರೈಸುವಂತೆ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ.
