ಮೈಸೂರು: ನಗರದ ಕೈಗಾರಿಕಾ ಪ್ರದೇಶವಾಗಿರುವ ಮೇಟಗಳ್ಳಿ ಬಡಾವಣೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಾವು-ಚೇಳುಗಳ ಜತೆಗೆ ಗಾರ್ಬೇಜ್ ಬಡಾವಣೆಯಾಗಿ ಮಾರ್ಪಟ್ಟಿದೆ.
ಬೇಸಿಗೆ ಕಾಲುಟ್ಡಿದೆ.ಮಕ್ಕಳಿಗೆ ರಜಾ ದಿನಗಳು, ಆದರೆ ಮನೆಯ ಹೊರಗೆ ಆಟವಾಡಲು, ಮಹಿಳೆಯರು,ಹಿರಿಯ ನಾಗರಿಕರು ವಾಯು ವಿಹಾರ ಮಾಡಲು ಹೊರಗೆ ಕಾಲಿಡಲು ಹೆದರುವಂತಾಗಿದೆ.
ಈ ಪ್ರದೇಶದಲ್ಲಿನ ಖಾಲಿನಿವೇಶನಗಳಲ್ಲಿ ಹೊಂಗೆ, ಮಾವು,ಬೇವು ಸೇರಿದಂತೆ ವಿವಿಧ ಬಗೆಯ ಮರಗಳು ಸಮೃದ್ಧವಾಗಿ ಬೆಳೆದುನಿಂತಿವೆ. ಇಲ್ಲಿನ ಮಥುರಾ ಉದ್ಯಾನ, ಶ್ರೀಲಕ್ಷ್ಮಿವೆಂಕಟೇಶ್ವರ ದೇವಸ್ಥಾನ, ಶ್ರೀ ಮಾರಮ್ಮ ದೇವಸ್ಥಾನದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಗಿಡ-ಗಂಟಿಗಳು ಸೊಂಪಾಗಿ ಬೆಳೆದಿದ್ದು ಹಾವು-ಚೇಳುಗಳ ಆವಾಸ ಸ್ಥಾನವಾಗಿದೆ.
ಹಾವುಗಳು ಕಂಡ ತಕ್ಷಣ ಇಲ್ಲಿನ ನಾಗರಿಕರು ಉರಗ ತಜ್ಞ ಸ್ನೇಕ್ಶ್ಯಾಂ ಅವರಿಗೆ ಕರೆ ಮಾಡುತ್ತಾರೆ. ಕರೆ ಬಂದ ಕೂಡಲೇ ಸ್ಥಳಕ್ಕೆ ಧಾವಿಸುವ ಸ್ನೇಕ್ ಶ್ಯಾಂ ಹಾವುಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುತ್ತಾರೆ.
ಈ ಕಾರ್ಯದಲ್ಲಿ ಸ್ನೇಕ್ಶ್ಯಾಂ ಅವರ ಮಗ ಸೂರ್ಯ ಕೀರ್ತಿಕೂಡ ಕೈಜೋಡಿಸುತ್ತಾರೆ. ಜೊತೆಗೆ ಈ ಭಾಗದ ಜನರೂ ಈಗೀಗ ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದು, ಆಗಾಗ್ಗೆ ಕಂಡುಬರುವ ಹಾವುಗಳನ್ನು ಹಿಡಿಯುತ್ತಾರೆ.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಬಡಾವಣೆಯತ್ತ ಗಮನ ಹರಿಸಿ ತ್ಯಾಜ್ಯವನ್ನು ಬೇರೆಡೆ ಸಾಗಿಸಲು ಕ್ರಮ ಕೈಗೊಳ್ಳಬೇಕು, ಹಾವು ಚೇಳುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಬಡಾವಣೆಯ ನಾಗರೀಕರು ಆಗ್ರಹಿಸಿದ್ದಾರೆ.
ಮಥುರಾ ಉದ್ಯಾನ ಆವರಣದ ಗೋಡೆಗೆ ಹೊಂದಿಕೊಂಡಂತೆಯೇ ಹಸಿ ತ್ಯಾಜ್ಯ, ಒಣ ಕಸ ಸುರಿಯಲಾಗುತ್ತಿದೆ. ಮಥುರಾ ನಗರ ೩ನೇ ‘ಬಿ’ ಅಡ್ಡರಸ್ತೆ ನಾಮ-ಲಕದ ಬಳಿಯೂ ಕಸ ಸುರಿಯಲಾಗಿದೆ. ಮಥುರಾ ಉದ್ಯಾನದ
ಒಳಭಾಗದಲ್ಲಿಯೂ ಅಲ್ಲಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ರಸ್ತೆ ಬದಿಯೂ ಕಸದ ರಾಶಿ ಇದೆ.
ಮೇಟಗಳ್ಳಿಯಲ್ಲಿ ಹಾದು ಹೋಗಿರುವ ರೈಲು ಮಾರ್ಗದ ಎರಡೂ ಬದಿ ರಾಶಿ ರಾಶಿ ಕಸ ಬಿದ್ದಿದೆ.ಇದರಿಂದಾಗಿ ಪಾದಚಾರಿಗಳು, ವಾಯು ವಿಹಾರಿಗಳು ವಾಸನೆ ತಡೆಯಲಾರದೆ ಬೇಸರ ಹೊರ ಹಾಕಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಕಸದ ರಾಶಿ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
