ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿದೆ.
ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ಗೌಡ ಕೊಲೆ ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಗುರುವಾರ ಪ್ರಕಟಿಸಲಿದೆ.
21 ಆರೋಪಿಗಳ ಪೈಕಿ 17 ಮಂದಿ ದೋಷಿಗಳಾಗಿದ್ದಾರೆ. 20ನೇ ಆರೋಪಿ ವಾಸುದೇವ ನಿಲಕೇಣಿ, 21ನೇ ಆರೋಪಿ ಸೋಮಶೇಕರ್ ನ್ಯಾಮಗೌಡ ಅವರನ್ನು ಕೋರ್ಟ್ ಈ ಪ್ರಕರಣದಿಂದ ಖುಲಾಸೆಗೊಳಿಸಿದೆ.
ಎಲ್ಲಾ ದೋಷಿಗಳನ್ನು ಕಸ್ಟಡಿಗೆ ಪಡೆಯುವಂತೆ ಕೋರ್ಟ್ ಸಿಬಿಐಗೆ ಸೂಚಿಸಿದೆ. ಎ-1 ಬಸವರಾಜ್ ಮುತ್ತಗಿ ಮತ್ತು ಎ17-ಶಿವಾನಂದ ಬಿರಾದರ್ ಸರ್ಕಾರಿ ಸಾಕ್ಷಿಗಳಾಗಿರುವ ಕಾರಣ ಅವರನ್ನು ಕೋರ್ಟ್ ನಿರ್ದೋಷಿ ಎಂದು ಹೇಳಿದೆ.
ಸಿಆರ್ಪಿಸಿ ಸೆಕ್ಷನ್ 302 (ಕೊಲೆ), 120B (ಕ್ರಿಮಿನಲ್ ಪಿತೂರಿ), ಸೆಕ್ಷನ್ 201 (ಸಾಕ್ಷ್ಯ ನಾಶ), ಸೆಕ್ಷನ್ 148 (ಮಾರಕಾಸ್ತ್ರಗಳೊಂದಿಗೆ ಗಲಭೆ), ಸೆಕ್ಷನ್ 149 (ಸಾಮಾನ್ಯ ಉದ್ದೇಶ) ಅಡಿ ಆರೋಪಗಳು ಸಾಬೀತಾಗಿದೆ ಎಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
ವಿಕ್ರಂ, ಕೀರ್ತಿಕುಮಾರ್, ಸಂದೀಪ್, ವಿನಾಯಕ, ಮಹಾಬಲೇಶ್ವರ, ಸಂತೋಷ, ದಿನೇಶ್, ಅಶ್ವಥ್, ಸುನೀಲ್,ನಜೀರ್ ಅಹ್ಮದ್, ಶಾನವಾಝ್,ನೂತನ್, ಹರ್ಶಿತ್, ವಿನಯ ಕುಲಕರ್ಣಿ, ಚಂದ್ರಶೇಖರ್ ಇಂಡಿ, ವಿಕಾಸ್ ಕಲಬುರಗಿ, ಚನ್ನಕೇಶವ ಟಿಂಗರಿಕರ್ ಎಂಬವರು ದೋಷಿಗಳು ಎಂದು ತಿಳಿಸಲಾಗಿದೆ.
ಈ ಎಲ್ಲಾ ಆರೋಪಿಗಳನ್ನು ಬಸ್ ನಲ್ಲಿ ಪೊಲೀಸರು ಸಂಜೆ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದರು.
