ಮೈಸೂರು: ದೇಶ ಸ್ವತಂತ್ರಗೊಂಡ ನಂತರ ರಾಜ ಪ್ರಮುಖರಾಗಿ ಸೇವೆ ಸಲ್ಲಿಸಿದ್ದ ಮೈಸೂರು ಸಂಸ್ಥಾನದ ಕೊನೆಯ ಅರಸ ಜಯಚಾಮರಾಜ ಒಡೆಯರ್ ಅವರು ನಗರದಲ್ಲಿ ಕಟ್ಟಿಸಿದ್ದ ಸುಮಾರು ೭೬ ವರ್ಷಗಳ ಇತಿಹಾಸವುಳ್ಳ ದುರ್ಗಯ್ಯನ ಕೊಳ (ಸರಸ್ವತಿಪುರಂ ಕಲ್ಯಾಣಿ)ವನ್ನು ಪುನರುಜ್ಜೀವನ ಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.
ಸುಮಾರು ೪ ಕೋಟಿ ವೆಚ್ಚದಲ್ಲಿ ಪುನರುಜ್ಜೀವನ ಗೊಳಿಸಲು ನಗರ ಪಾಲಿಕೆ ಮುಂದಾಗಿದ್ದು, ಕಡೆಗೂ ಕಲ್ಯಾಣಿಗೆ ರಾಜಯೋಗ ಬಂದಂತಾಗಿದೆ.
ರಾಜ ವಂಶಸ್ಥರಾದ ಜಯಚಾಮ ರಾಜ ಒಡೆಯರ್ ಅವರು ಕ್ಷೌರ (ಹೇರ್ ಕಟಿಂಗ್-ಶೇವಿಂಗ್) ಮಾಡಿಸಲು ಬರುತ್ತಿದ್ದ ಸ್ಥಳ. ಅವರು ಅಲ್ಲಿಗೆ ಬರುತ್ತಿದ್ದಾರೆ ಎಂದು ಗೊತ್ತಾ ಗುತ್ತಿದ್ದಂತೆ ಸುತ್ತಮುತ್ತಲಿನ ಊರುಗಳ ನೂರಾರು ಜನರು ಅಲ್ಲಿ ಜಮಾಯಿಸುತ್ತಿದ್ದರು ಎಂದು ಸಾಕಷ್ಟು ಹಿರಿಯರು ಹೇಳುತ್ತಾರೆ.
ಈ ಕಲ್ಯಾಣಿ ಇರುವುದು ಸರಸ್ವತಿಪುರಂ ಈಜುಕೊಳದ ಬಳಿ. ಹಳೆಯ ಶಿಲಾ ಫಲಕವೊಂದರಲ್ಲಿ ಅದು ದುರ್ಗಯ್ಯನ ಕೊಳ ಎಂದಿದೆ.
ಕಾಲಾನಂತರದಲ್ಲಿ ಅದರ ಹೆಸರು ಸರಸ್ವತಿಪುರಂ ಕಲ್ಯಾಣಿ ಎಂದು ಬದಲಾಗಿದೆ. ಆದರೆ, ದುರ್ಗಯ್ಯ ಯಾರು,ಆತನ ಹೆಸರಿನಲ್ಲಿ ಕೊಳವನ್ನು ಕಟ್ಟಿಸಿದ್ದೇಕೆ ಎಂಬ ಮಾಹಿತಿ ಇಲ್ಲ.
ಈಗ ದುರ್ಗಯ್ಯನ ಕೊಳ ಕಸಕಡ್ಡಿಗಳಿಂದ ತುಂಬಿ ಕೆಸರುಮಯವಾಗಿದೆ, ಪ್ಲಾಸ್ಟಿಕ್ ವಸ್ತುಗಳು, ಮದ್ಯ ಸೇವನೆ ಮಾಡಿ ಎಸೆದ ಬಾಟಲಿಗಳು, ಹಳೆಯ ಟೈರ್ಗಳು, ಬೆಳೆದು ನಿಂತ ಕುರು ಚಲು ಗಿಡಗಳು ನೋಡಿದರೆ ವಾಜರಿಕೆ ಬರುತ್ತದೆ,ಹಿಂದೆ ಇಲ್ಲಿ ಸುಂದರ ಕಲ್ಯಾಣಿ ಇತ್ತೆ ಅನಿಸುತ್ತದೆ.
ನಗರದ ಮಧ್ಯಭಾಗದಲ್ಲಿ ಅದೂ ಕುಕ್ಕರಹಳ್ಳಿ ಕೆರೆ ಬಳಿ ಇರುವ ಈ ಕಲ್ಯಾಣಿ ಇಂದು ಸಂಪೂರ್ಣ ಹಾಳಾಗಿದೆ, ಒಂದು ಕಾಲದಲ್ಲಿ ಮಹಾ ರಾಜರೇ ಈ ಕೊಳದತ್ತ ಬರುತ್ತಿದ್ದರೆ ಎಂಬ ಅನುಮಾನ ಹುಟ್ಟಿಸುತ್ತಿದೆ.
ಅಂತು ಕೊನೆಗೂ ಎಚ್ಚೆತ್ತ ಮೈಸೂರು ಮಹಾನಗರ ಪಾಲಿಕೆ ಈ ಕಲ್ಯಾಣಿಯ ಅಭಿವೃದ್ಧಿಗೆ ಮುಂದಾಗಿದೆ ಇದು ಸ್ವಾಗತಾರ್ಹ.
ಕೆರೆಯ ಹೂಳೆತ್ತಲು, ಸುತ್ತಲೂ ಕಟ್ಟೆ ಕಟ್ಟಲು ಹಾಗೂ ಅದರ ಸುತ್ತ ಮುತ್ತ ಉದ್ಯಾನ ನಿರ್ಮಿಸಿ ಸೌಂದರ್ಯಗೊಳಿಸಲು ನಿರ್ಧರಿಸಿದೆ.
ಇದಕ್ಕಾಗಿ ಕೇಂದ್ರ ಸರ್ಕಾರದ ಕೆರೆಗಳ ಅಭಿವೃದ್ಧಿ ಅನುದಾನದಲ್ಲಿ ೪ ಕೋಟಿ ರೂ.ಹಣವನ್ನು ಮೀಸಲಿಡಲಾಗಿದೆ. ಕಳೆದ ಜ.೨೧ರಂದು ನಡೆದ ಸಭೆಯಲ್ಲಿ ಡಿಪಿಆರ್ ಮಂಡಿಸಿ ಅನುಮೋದನೆ ಪಡೆಯಲಾಗಿದೆ.
ದಾಖಲೆಗಳನ್ನು ಪೌರಾಡಳಿತ ಇಲಾಖೆಗೆ ಕಳುಹಿಸಲಾಗಿದೆ.
ಎಲ್ಲ ಸರಿಯಾದರೆ ಇನ್ನಾ ಆರು ತಿಂಗಳೊಳಗೆ ಕಲ್ಯಾಣಿಯನ್ನು ಪುನಶ್ಚೇತನಗೊಳ್ಳುತ್ತದೆ.
೧೯೫೧ರಲ್ಲಿ ನಿರ್ಮಾಣವಾದ ಕೊಳ. ಅಂದಿನ ಮೈಸೂರು ಮಹಾ ರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಅಲ್ಲಿಗೆ ಕ್ಷೌರ ಮಾಡಿ ಸಿಕೊಳ್ಳಲು ಬರುವ ಸಮಯದಲ್ಲಿ ನಗರದ ಕೆ.ಜಿ. ಕೊಪ್ಪಲು, ತೊಣಚಿ ಕೊಪ್ಪಲು, ಕುಕ್ಕರಹಳ್ಳಿ, ಬೋಗಾದಿ, ಮಳಲವಾಡಿ ಸೇರಿದಂತೆ ವಿವಿಧ ಊರುಗಳಿಂದ ನೂರಾರು ಜನರು ಬಂದು ತಮ್ಮ ಹಳ್ಳಿಯ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುತ್ತಿದ್ದರು ಎಂದು ಹಿರಿಯರು ಸ್ಮರಿಸುತ್ತಾರೆ.
ಅಷ್ಟೇ ಅಲ್ಲ ಬೋಗಾದಿ, ಮರಟೀಕ್ಯಾತನಹಳ್ಳಿ ಸೇರಿದಂತೆ ವಿವಿಧ ಊರುಗಳಿಂದ ಎತ್ತಿನ ಗಾಡಿಯಲ್ಲಿ ವ್ಯಾಪಾರಕ್ಕಾಗಿ ಮೈಸೂರಿಗೆ ಬರುತ್ತಿದ್ದ ಜನರಿಗೆ ಕುಡಿಯುವ ನೀರಿಗೆ ಈ ಕಲ್ಯಾಣಿ ಆಧಾರವಾಗಿತ್ತು.
ಎತ್ತಿನಗಾಡಿಗಳನ್ನು ಕಲ್ಯಾಣಿಯ ಬಳಿ ನಿಲ್ಲಿಸಿ ತಾವೂ ನೀರು ಕುಡಿಯುವುದಲ್ಲದೆ ಎತ್ತುಗಳಿಗೆ ನೀರು ಕುಡಿಸುತ್ತಿದ್ದರು. ನಂತರ ತಂದ ಬುತ್ತಿಯನ್ನು ಸೇವಿಸಿ ಅಲ್ಲಿಂದ ತೆರಳುತ್ತಿದ್ದರು.
ದಶಕಗಳ ನಂತರ ಕಲ್ಯಾಣಿಯ ನೀರಿನ ಅವಶ್ಯಕತೆ ಕಡಿಮೆಯಾಗುತ್ತಾ ಬಂತು, ಕೊಳ ಕೂಡ ಮಲಿನವಾಗತೊಡಗಿತು. ಜನರು ಬೇಡವಾದ ವಸ್ತುಗಳನ್ನು ಅಲ್ಲಿ ಎಸೆದು ಹೋಗುವ ಪ್ರವೃತ್ತಿ ಹೆಚ್ಚಾಗತೊಡಗಿತು.
ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ಅವರು ಕಲ್ಯಾಣಿಯನ್ನು ಉಳಿಸಿ ಎಂದು ಹೋರಾಟ ಆರಂಭಿಸಿದ್ದರು. ಆರ್.ಲಿಂಗಪ್ಪ ಅವರು ಮಹಾಪೌರರಾಗಿದ್ದ ವೇಳೆ ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಮುಂದಾದರು. ನಮ್ಮ ಮೈಸೂರು ತಂಡ ಹಾಗೂ ಇನ್ನಿತರರು ಸೇರಿ ಸುಮಾರು ೫೦ ಲಾರಿಯಷ್ಟು ಹೂಳನ್ನು ತೆಗೆದಿತ್ತು.
ಲಿಂಗಪ್ಪ ಅವರು ಕಲ್ಯಾಣಿಗೆ ಶಾಶ್ವತ ಕಾಯಕಲ್ಪ ನೀಡಬೇಕು ಎಂದು ಉದ್ದೇಶಿಸಿ ಅಂದಾಜು ವೆಚ್ಚವನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಮುಂದೆ ಅವರ ಅವಧಿ ಪೂರ್ಣಗೊಂಡಿತ್ತು. ಕಲ್ಯಾಣಿಯನ್ನು ಪುನರುಜ್ಜೀವನಗೊಳಿಸುವ ಕೆಲಸ ಕೂಡ ಅಲ್ಲೇ ನಿಂತಿತು.
ಈಗ ಅಧಿಕಾರಿಗಳ ದರ್ಬಾರ್ ನಲ್ಲೂ ಈ ಕಲ್ಯಾಣಿಯ ಕಯಕಲ್ಪ ಆಗುತ್ತಿರುವು ಸಂತಸದ ವಿಷಯ.
