ಮೈಸೂರು: ಬಹಳ ದಿನಗಳಿಂದ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಜಿಲ್ಲೆಯ ನಂಜನಗೂಡು ತಾಲೂಕು, ಹುಲ್ಲಳ್ಳಿ ಗ್ರಾಮದ ಪೂಜಾ (24) ಎಂಬುವವರ ನಿವಾಸಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
ಪೂಜಾ ಅವರ ಅನಾರೋಗ್ಯದ ಬಗ್ಗೆ ಯುವಕನೊಬ್ಬ ವೀಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿ, ಈ ವಿಡಿಯೋ ಕುಮಾರಸ್ವಾಮಿ ಅವರಿಗೆ ಮುಟ್ಟುವ ತನಕ ಶೇರ್ ಮಾಡಿ ಎಂದು ಸಾರ್ವಜನಿಕರನ್ನು ವಿನಂತಿ ಮಾಡಿದ್ದ.
ಈ ವಿಡಿಯೋವನ್ನು ಗಮನಿಸಿದ್ದ ಕೇಂದ್ರ ಸಚಿವರು ಶುಕ್ರವಾರ ಪೂಜಾ ಅವರ ನಿವಾಸಕ್ಕೆ ತೆರಳಿ ಆರೋಗ್ಯದ ಸಮಸ್ಯೆಯನ್ನು ಆಲಿಸಿ ನೆರವಿನ ಹಸ್ತ ಚಾಚಿದರು.
ಸುಮಾರು ಮುಕ್ಕಾಲು ಗಂಟೆ ಕಾಲ ಪೂಜಾ, ಅವರ ಪತಿ ರವಿ, ಅವರ ತಂದೆ ಕುಮಾರ, ತಾಯಿ ಶೀಲಾ ಅವರೊಂದಿಗೆ ಚರ್ಚಿಸಿದ ಸಚಿವರು, ಕುಟುಂಬಕ್ಕೆ ಧೈರ್ಯ ಹೇಳಿ,ನಿಮ್ಮ ಜತೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ತಮ್ಮ ಮನೆಗೆ ಕುಮಾರಸ್ವಾಮಿ ಬಂದ ಕೂಡಲೇ ಇಡೀ ಕುಟುಂಬ ಕಣ್ಣೀರಾಯಿತು. ಪೂಜಾ ಅವರು ಸಚಿವರನ್ನು ಕಂಡು ತೀವ್ರ ಭಾವೋದ್ವೇಗಕ್ಕೆ ಒಳಗಾದರು.
ಅಲ್ಲದೆ, ಕುಟುಂಬದ ಪರಿಸ್ಥಿತಿಯ ಬಗ್ಗೆ ಸ್ಥಳೀಯರು ಹಾಗೂ ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು, ಪಂಚಾಯತ್ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದರು ಪೂಜಾ ಅವರ ಆರೋಗ್ಯದ ಬಗ್ಗೆ ಪೋಷಕರಿಂದ ವಿವರ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಸಚಿವರು ಪೂಜಾ ಅವರ ಸಂಕಷ್ಟದ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿದ್ದ ಯುವಕ ಚೇತನ್ ಅವರನ್ನು ಶ್ಲಾಘಿಸಿದರು, ತನ್ನ ವಿಡಿಯೋ ನೋಡಿ ಪೂಜಾ ಅವರ ಮನೆಗೆ ಬಂದ ಸಚಿವರಿಗೆ ಆತ ಧನ್ಯವಾದ ಸಲ್ಲಿಸಿದರು.
ಪೂಜಾ ಅವರು ಬೆನ್ನಿನ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು.ನಂತರ ಆ ಚಿಕಿತ್ಸೆಯ ಅಡ್ಡ ಪರಿಣಾಮವಾಗಿ ಅವರ ಎರಡು ಕಾಲುಗಳು ಸಮಸ್ಯೆಗೆ ತುತ್ತಾಗಿವೆ. ಮೊದಲು ಅವರ ಒಂದು ಕಾಲಿಗೆ ಆಪರೇಷನ್ ಆಗಿತ್ತು. ಅದು ಸರಿ ಹೋಗಲಿಲ್ಲ, ಈಗ ಮತ್ತೊಂದು ಕಾಲಿಗೆ ಆಪರೇಷನ್ ಆಗಿದೆ. ಹಲವಾರು ತಿಂಗಳಿನಿಂದ ಪೂಜಾ ಅವರು ಹಾಸಿಗೆ ಹಿಡಿದಿದ್ದಾರೆ. ಕುಟುಂಬ ತೀವ್ರ ಆರ್ಥಿಕ ಕಷ್ಟದಿಂದ ಬಳಲುತ್ತಿದೆ. ಈಗಾಗಲೇ ಹಲವು ಶಸ್ತ್ರಚಿಕಿತ್ಸೆಗಳು ನಡೆದಿದ್ದರೂ ಪೂಜಾ ಅವರಿಗೆ ಗುಣಮುಖ ಆಗಿಲ್ಲ. ಹುಲ್ಲಳ್ಳಿ ಗ್ರಾಮದಲ್ಲಿ ಸ್ವಂತ ಸೂರು ಇಲ್ಲದೆ ಕಷ್ಟಪಡುತ್ತಿರುವ ಕುಟುಂಬದ ಬಗ್ಗೆ ಸ್ಥಳೀಯರು ಸಚಿವರಿಗೆ ಮಾಹಿತಿ ನೀಡಿದರು.
ಅಲ್ಲದೆ, ಮಗಳಿಗೆ ಚಿಕಿತ್ಸೆ ಕೊಡಿಸಲು ಸ್ವಂತ ಮನೆ ಮತ್ತು ಅಲ್ಪಸ್ವಲ್ಪ ಭೂಮಿಯನ್ನು ತಂದೆ ಮಾಡಿಕೊಂಡಿದ್ದಾರೆ. ಈಗ ವಾಸ ಇರುವ ಮನೆಗೆ ಬಾಡಿಗೆ ಕಟ್ಟಲಾಗದೇ ಕುಟುಂಬ ಕಷ್ಟದಲ್ಲಿದೆ. ಅಲ್ಲದೆ, ಪತಿ ರವಿ ಕೂಡ ಕೆ ಎಸ್ ಆರ್ ಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ಅವರಿಗೂ ದುಡಿಮೆ ಮಾಡಲು ಆಗುತ್ತಿಲ್ಲ ಎಂದು ಅವರು ಹೇಳಿದರು. ಅವರ ಮನವಿಗೆ ಮರುಗಿದ ಸಚಿವರು, ಸ್ಥಳದಲ್ಲಿಯೇ ಚಿಕಿತ್ಸೆಗೆ ಧನಸಹಾಯ ಮಾಡಿದರು.
ಪೂಜಾ ಕುಟುಂಬಕ್ಕೆ ಗ್ರಾಮದಲ್ಲಿ ವಾಸಕ್ಕೆ ಸ್ವಂತ ಮನೆ ಇಲ್ಲದ್ದನ್ನು ತಿಳಿದು ಲೀಸಿಗೆ ಮನೆ ಕುಡಿಸುವುದಾಗಿಯೂ, ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಮನೆಯ ವ್ಯವಸ್ಥೆ ಮಾಡಲು ಪ್ರಯತ್ನಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು.
ಸ್ಥಳದಲ್ಲಿ ಇದ್ದ ಶಾಸಕ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಶಾಸಕ ಮಹದೇವ್ ಮತ್ತು ಅಶ್ವಿನ್ ಅವರಿಗೆ ಇದರ ಜವಾಬ್ದಾರಿ ವಹಿಸಿದರು. ನಂಜನಗೂಡಿನ ಸ್ಥಳೀಯ ಮುಖಂಡರಿಗೆ ಕಾಲಕಾಲಕ್ಕೆ ಕುಟುಂಬದ ಬಗ್ಗೆ ಅವರ ಆಗುಹೋಗುಗಳ ಬಗ್ಗೆ ಮಾಹಿತಿ ಕೊಡಬೇಕೆಂದು ಸೂಚನೆ ನೀಡಿದರು.
ಇದೇ ವೇಳೆ ಪಾಂಡವಪುರದಲ್ಲಿ ನೆಲೆಸಿರುವ ಮನೆಯ ಮಾಲೀಕನಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದ ಸಚಿವರು, ಮಾನವೀಯ ದೃಷ್ಟಿಯಿಂದ ಈ ಕುಟುಂಬಕ್ಕೆ ಎರಡು ಮೂರು ವರ್ಷ ಲೀಸಿಗೆ ಮನೆ ಕೊಡಿ ಎಂದು ಕೋರಿದರು.
ಅಲ್ಲದೆ, ಲೀಜಿನ ಮೊತ್ತವನ್ನು ಸ್ವತಹ ನಾನೇ ತುಂಬಿ ಕೊಡುವೆ ಎಂದು ಮನೆ ಮಾಲೀಕನಿಗೆ ತಿಳಿಸಿದರು. ಆದರೆ ಮನೆ ಮಾರುತ್ತಿರುವುದಾಗಿ ಮನೆ ಮಾಲೀಕ ಸಚಿವರಿಗೆ ತಿಳಿಸಿದರು.
ಅಂತಿಮವಾಗಿ ಪರ್ಯಾಯ ವ್ಯವಸ್ಥೆ ಮಾಡಲು ಮುಖಂಡರಿಗೆ ಸೂಚಿಸಿ ತಮಗೆ ಅಪ್ಡೇಟ್ ಮಾಡುವಂತೆ ಹೇಳಿದರು, ಇವರ ಪರಿಸ್ಥಿತಿಯ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಿಇಒ ಅವರೊಂದಿಗೂ ಚರ್ಚೆ ನಡೆಸುತ್ತೇನೆ ಎಂದು ಹೆಚ್ ಡಿ ಕೆ ಭರವಸೆ ನೀಡಿದರು.
ಕೆಎಸ್ ಆರ್ ಟಿಸಿ ಎಂಡಿ ಜತೆಗೂ ಕುಮಾರಸ್ವಸಮಿ ಮಾತನಾಡಿ,ಪೂಜಾ ಪತಿಗೆ ನೆರವು ನೀಡುವಂತೆ ಕೋರಿದರು.ಇದಕ್ಕೆ ಲೋಕ ಅದಾಲತ್ ನಲ್ಲಿಯೇ ಪ್ರಕರಣಕ್ಕೆ ಮುಕ್ತಾಯ ಮಾಡಿಸಿ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಎಂಡಿ ಭರವಸೆ ನೀಡಿದರು.
ಸ್ಥಳದಲ್ಲಿ ಹಾಜರಿದ್ದ ತಹಸಿಲ್ದಾರ್ ಗೆ ಸೂಚನೆ ಕೊಟ್ಟ ಸಚಿವರು, ಕುಟುಂಬಕ್ಕೆ ಜೀವನಕ್ಕಾಗಿ ಒಂದು ಅಂಗಡಿಯನ್ನು ಹಾಕಿಕೊಡುವ ವ್ಯವಸ್ಥೆ ಮಾಡುವಂತೆ ಹೇಳಿದರು. ಅಲ್ಲದೆ, ಮೈಸೂರಿನಲ್ಲಿ ಪೂಜಾ ಮತ್ತು ಅವರ ಪತಿ ರವಿ ಅವರಿಗೆ ಚಿಕಿತ್ಸೆ ಕೊಡಿಸಲು ಪಕ್ಷದ ಮುಖಂಡರಿಗೆ ಸೂಚಿಸಿ ವ್ಯವಸ್ಥೆ ಮಾಡಿಸಿದರು.
