ಬೆಂಗಳೂರು: ದಣಿವರಿಯದ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿಯವರ ಪುತ್ಥಳಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸ್ಥಾಪಿಸಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಮೆಟ್ರೋ ನಿಲ್ದಾಣಕ್ಕೆ ದೊರೆಸ್ವಾಮಿಯವರ ಹೆಸರನ್ನು ಮರುನೇಮಕ ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ನಗರದ ಗಾಂಧಿ ಪ್ರತಿಮೆ ಬಳಿ ಶುಕ್ರವಾರ ನಡೆದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಚ್.ಎಸ್. ದೊರೆಸ್ವಾಮಿ ಅವರ 108ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡುತ್ತಾ ದೊರೆಸ್ವಾಮಿಯವರು ತಮ್ಮ ಬಾಲ್ಯಾವಸ್ಥೆಯಿಂದಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು ಎಂದು ಹೇಳಿದರು.
ಅಂದಿನ ಕಾಲದಲ್ಲಿ ಉತ್ತರ ಭಾರತಕ್ಕೆ ಮಾತ್ರ ಮೀಸಲಿದ್ದ ಸ್ವಾತಂತ್ರ್ಯ ಹೋರಾಟವನ್ನು ದಕ್ಷಿಣ ಭಾರತದಲ್ಲೂ ವಿಸ್ತರಿಸಲು ದೊರೆಸ್ವಾಮಿಯವರು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಆರಂಭಿಸಲು ಮನೆ ಮನೆಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಅಂದಿನ ಕಾಲದ ಕಾರ್ಮಿಕ ನಾಯಕರುಗಳನ್ನು ಭೇಟಿ ಮಾಡಿ ಮನವೊಲಿಸಿ ಕಾರ್ಮಿಕರುಗಳು ಸಹಸ್ರಾರು ಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ಪ್ರೇರಣಾ ಶಕ್ತಿಯಾಗಿದ್ದರು. ಬ್ರಿಟಿಷರ ಬೂಟೇಟಿಗೆ ತುತ್ತಾಗಿ ಅನೇಕ ಬಾರಿ ಸೆರೆಮನೆವಾಸ ಅನುಭವಿಸಿದ್ದರು ಎಂದು ಸ್ಮರಿಸಿದರು.
ಸ್ವಾತಂತ್ರ್ಯ ನಂತರವೂ ಸಹ ರಾಷ್ಟ್ರದ ಹಾಗೂ ರಾಜ್ಯದ ಲೆಕ್ಕವಿಲ್ಲದಷ್ಟು ಅನೇಕ ಜ್ವಲಂತ ವಿಚಾರಗಳಲ್ಲಿ ಮುಂದಾಳತ್ವ ವಹಿಸಿ ಹೋರಾಟಗಳನ್ನು ಮುನ್ನಡೆಸಿದ್ದರು.
ಜೀವನಪರ್ಯಂತ ದಣಿವರಿಯದ ಹೋರಾಟಗಾರರಾಗಿದ್ದರು. ಇಂತಹ ಮಹಾನ್ ಜೀವಿಯು ನಮ್ಮನ್ನಗಲಿ ಐದು ವರ್ಷಗಳಾದರೂ ಸಹ ಅವರನ್ನು ನೆನೆಯುವಂತಹ ಯಾವುದೇ ಕಾರ್ಯಕ್ರಮಗಳು ಆಗದಿರುವುದು ಸರ್ಕಾರಗಳ ನೈತಿಕತೆಯನ್ನು ಪ್ರಶ್ನಿಸುತ್ತಿದೆ ಎಂದು ಟೀಕಿಸಿದರು.
ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತು ದೊರೆಸ್ವಾಮಿಯವರ ಪುತ್ತಳಿಯನ್ನು ಕೂಡಲೇ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸ್ಥಾಪಿಸಿ,ಬೃಹತ್ ಕಾರ್ಯಕ್ರಮವನ್ನು ಆಯೋಜಿಸಬೇಕು. ಅದಲ್ಲದೆ ಅವರ ಹೆಸರು ಮುಂದಿನ ಪೀಳಿಗೆಯವರಿಗೆ ತಿಳಿಯಲು ಬೆಂಗಳೂರು ದಕ್ಷಿಣ ಭಾಗದ ಯಾವುದಾದರೂ ಮೆಟ್ರೋ ನಿಲ್ದಾಣಕ್ಕೆ ದೊರೆಸ್ವಾಮಿ ಅವರ ಹೆಸರನ್ನು ಮರುನಾಮಕರಣ ಮಾಡಿ ಸರ್ಕಾರವು ಸಾರ್ಥಕತೆಯನ್ನು ಮೆರೆಯಬೇಕು ಎಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.
ಈ ಬಗ್ಗೆ ಪಕ್ಷದ ವತಿಯಿಂದ ಸರ್ಕಾರಕ್ಕೆ ಅನೇಕ ಬಾರಿ ಮನವಿ ಪತ್ರಗಳನ್ನು ನೀಡಿದ್ದೇವೆ. ಆದರೆ ಯಾವ ಸರ್ಕಾರಗಳು ಇಂಥಹ ಮಹಾನ್ ಹೋರಾಟಗಾರರನ್ನು ನೆನೆಸುವಂತಹ ಸತ್ಕಾರ್ಯಗಳಿಗೆ ಕೈ ಹಾಕುತ್ತಿಲ್ಲ. ದೇಶಕ್ಕಾಗಿ ತ್ಯಾಗ ಬಲಿದಾನವನ್ನು ಮಾಡಿದಂತಹ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ಸೂಕ್ತ ಮರ್ಯಾದೆ ನೀಡುವ ಇಚ್ಛೆ ಕಾಂಗ್ರೆಸ್ ಸರ್ಕಾರಕ್ಕೆ ಇದ್ದಲ್ಲಿ ಕೂಡಲೇ ದೊರೆಸ್ವಾಮಿ ಅವರ ಪುತ್ತಳಿಯನ್ನು ಸ್ಥಾಪಿಸಬೇಕು ಎಂದು ಸೀತಾರಾಮ್ ಗುಂಡಪ್ಪ ಸಲಹೆ ನೀಡಿದರು.
