ಮೈಸೂರು: ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆಹಾರ ಪದಾರ್ಥ ಮಾರಾಟ ಕಂಡುಬಂದರೆ ಆಹಾರ ಸುರಕ್ಷತಾ ಅಧಿಕಾರಿಗಳು ಪ್ರಕರಣ ದಾಖಲಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ. ಶಿವರಾಜು ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ 2006ರ ಅನುಷ್ಠನದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ
ಮಾತನಾಡಿದ ಅವರು,ಸಾರ್ವಜನಿಕರು ಹಣ ನೀಡಿ ಆಹಾರ ಪದಾರ್ಥ ಖರೀದಿಸುತ್ತಾರೆ,
ಅವರಿಗೆ ಗುಣಮಟ್ಟದ ಆಹಾರ ಪದಾರ್ಥ ನೀಡಬೇಕಾದುದು ಮಾರಾಟಗಾರರ ಕೆಲಸ ಎಂದು ತಿಳಿಸಿದರು.
ಮೈಸೂರು ನಗರ ವ್ಯಾಪ್ತಿಯಲ್ಲಿ ಆಹಾರ ಸುರಕ್ಷತೆ ಪರಿಶೀಲಿಸಲು 3 ವೃತ್ತಕ್ಕೆ ಅಧಿಕಾರಿಗಳಿದ್ದು, ಆಹಾರ ಗುಣಮಟ್ಟದ ಪರಿಶೀಲನೆಯ ಸರ್ವೆಗಳು ಅಕ್ಟೋಬರ್ 2025 ರಿಂದ ಡಿಸೆಂಬರ್ 2025ರವರೆಗೆ 130 ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಸರ್ವೆ ನಡೆಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಬೇಕು ಎಂದು ಸೂಚಿಸಿದರು.
ಬೀದಿ ಬದಿ ಆಹಾರ ಪದಾರ್ಥ ಮಾರಾಟ ಮಾಡುವ ಸ್ಥಳಗಳಲ್ಲಿ ಜನರು ಹೆಚ್ಚು ಆಹಾರ ಸೇವಿಸುತ್ತಾರೆ. ಈ ಸ್ಥಳಗಳಲ್ಲಿ ಮುಂದಿನ ದಿನಗಳಲ್ಲಿ ಆಹಾರ ಗುಣಮಟ್ಟದ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ಆದೇಶಿಸಿದರು.
ಆಹಾರ ಸುರಕ್ಷತಾ ಕಚೇರಿಯ ಎಫ್.ಎಸ್.ಎಸ್.ಎ.ಐ ವೆಬ್ ಸೈಟ್ ನಲ್ಲಿ 1.5 ಕೋಟಿ ರೂ ಗಿಂತ ಹೆಚ್ಚಿನ ವಹಿವಾಟು ಮಾಡುವ ಆಹಾರ ಮಾರಾಟಗಾರರು ಅರ್ಜಿ ಸಲ್ಲಿಸಿ ಪರವಾನಗಿ ಪಡೆಯಬೇಕು, 1.5 ಕೋಟಿಕ್ಕಿಂತ ಕಡಿಮೆ ವಹಿವಾಟು ಮಾಡುವವರು ನೊಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕುರುಕಲು ತಿಂಡಿ ಸೇರಿದಂತೆ ಹಲವಾರು ಆಹಾರ ಪದಾರ್ಥಗಳನ್ನು ಎರಡು, ಮೂರು ಅಥವಾ ಹೆಚ್ಚು ಬಾರಿ ಕಾಯಿಸಿ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೋಟೆಲ್, ಆಹಾರ ಮಾರಾಟ ಅಂಗಡಿಗಳಲ್ಲಿ ಪರಿಶೀಲನೆ ನಡೆಸುವಾಗ ತೀವ್ರ ನಿಗಾ ವಹಿಸಿ, ರಾಸಾಯನಿಕ ಪರೀಕ್ಷೆಗೆ ಒಳಪಡಿಸುವುದರ ಜೊತೆಗೆ ಮಾರಾಟಗಾರರು ಎಣ್ಣೆ ಖರೀದಿಸಿರುವುದು, ಬಳಸಿರುವುದು, ಉಳಿಕೆಯನ್ನು ವಿಲೇವಾರಿ ಮಾಡಿರುವುದನ್ನು ಪರಿಶೀಲಿಸಿ ಎಂದು ಶಿವರಾಜ್ ಸಲಹೆ ನೀಡಿದರು.
ಮೈಸೂರು ಮಹಾನಗರ ಪಾಲಿಕೆಯ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತದ ಅಂಕಿತ ಅಧಿಕಾರಿ ಡಾ: ರವೀಂದ್ರ ಅವರು ಮಾತನಾಡಿ ಇಲಾಖೆಯಿಂದ ಜೆ.ಎಂ.ಎಫ್.ಸಿ ನ್ಯಾಯಲಯದಲ್ಲಿ ಒಟ್ಟು 24 ಪ್ರಕರಣಗಳನ್ನು ದಾಖಲಿಸಲಾಗಿದೆ. 6 ಪ್ರಕರಣಗಳು ಇತ್ಯರ್ಥವಾಗಿ 70000 ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ: ಗೋಪಿನಾಥ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಲಿಂಗರಾಜು, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ ಎಸ್.ಹೆಚ್.ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
