ಮೈಸೂರು: ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಜಿಲ್ಲಾ 317ಜಿ ವ್ಯಾಪ್ತಿಯಲ್ಲಿ ನಡೆದ ಇತ್ತೀಚಿನ ಜಿಲ್ಲಾ ಚುನಾವಣೆಯಲ್ಲಿ ಸೇವಾ ಮನೋಭಾವ, ಸಂಘಟನಾ ಕೌಶಲ್ಯ ಮತ್ತು ದೀರ್ಘಕಾಲದ ಅನುಭವದಿಂದ ಪ್ರಸಿದ್ಧರಾಗಿರುವ ಎಂ.ಸಿದ್ದೇಗೌಡ ಅವರು ಎರಡನೇ ಉಪರಾಜ್ಯಪಾಲರಾಗಿ 2026-27 ನೇ ಸಾಲಿಗೆ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ.
ಈ ಸಾಧನೆಯ ಮೂಲಕ ಅವರು ಲಯನ್ಸ್ ಸಂಸ್ಥೆಯ ಜಿಲ್ಲಾ ಮಟ್ಟದ ಅತ್ಯಂತ ಪ್ರಮುಖ ನಾಯಕತ್ವ ಹುದ್ದೆಯನ್ನು ಅಲಂಕರಿಸಿ, ಹೊಸ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಎಂ. ಸಿದ್ದೇಗೌಡ ಅವರು ಹಲವು ವರ್ಷಗಳಿಂದ ಲಯನ್ಸ್ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ವಿವಿಧ ಹುದ್ದೆಗಳಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಕ್ಲಬ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ ಅನುಭವ ಅವರಿಗೆ ಇದೆ.
ವಿಶೇಷವಾಗಿ ಬಡಜನರಿಗೆ ವೈದ್ಯಕೀಯ ನೆರವು, ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಪರಿಸರ ಸಂರಕ್ಷಣೆ, ರಕ್ತದಾನ ಶಿಬಿರಗಳು ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ.
ಲಯನ್ಸ್ ಸಂಸ್ಥೆ ವಿಶ್ವದ ಅತಿ ದೊಡ್ಡ ಸೇವಾ ಸಂಘಟನೆಗಳಲ್ಲಿ ಒಂದಾಗಿದ್ದು,ವಿ ಸರ್ವ್ ಎಂಬ ಘೋಷವಾಕ್ಯದಡಿ ಮಾನವೀಯ ಸೇವೆಯನ್ನು ಧ್ಯೇಯವಾಗಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಎರಡನೇ ಉಪರಾಜ್ಯಪಾಲರ ಹುದ್ದೆ ಅತ್ಯಂತ ಮಹತ್ವದ್ದಾಗಿದ್ದು, ಜಿಲ್ಲಾರಾಜ್ಯಪಾಲರೊಂದಿಗೆ ಸಮನ್ವಯ ಸಾಧಿಸಿ ಜಿಲ್ಲೆಯ ಎಲ್ಲಾ ಕ್ಲಬ್ಗಳ ಚಟುವಟಿಕೆಗಳನ್ನು ಚುರುಕುಗೊಳಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಮಾಜಿ ಜಿಲ್ಲಾ ರಾಜ್ಯಪಾಲರಾದ ಡಾ ಎನ್. ಕೃಷ್ಣೆಗೌಡರು ತಿಳಿಸಿದರು.
ಎಂ. ಸಿದ್ದೇಗೌಡ ಅವರ ನಾಯಕತ್ವದಲ್ಲಿ ಜಿಲ್ಲಾ 317ಜಿ ವ್ಯಾಪ್ತಿಯ ಎಲ್ಲಾ ಲಯನ್ಸ್ ಕ್ಲಬ್ಗಳು ಇನ್ನಷ್ಟು ಚೈತನ್ಯದಿಂದ ಕಾರ್ಯನಿರ್ವಹಿಸಿ, ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ವಿಶ್ವಾಸವಿದೆ, ಯುವ ಸದಸ್ಯರನ್ನು ಪ್ರೋತ್ಸಾಹಿಸುವುದು, ಹೊಸ ಸೇವಾ ಯೋಜನೆಗಳನ್ನು ರೂಪಿಸುವುದು ಮತ್ತು ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು ಅವರ ಪ್ರಮುಖ ಆದ್ಯತೆಗಳಾಗಿವೆ ಎಂದು ಜಿಲ್ಲಾ ರಾಜ್ಯಪಾಲರಾದ ಲಯನ್ ಕೆ ಎಲ್ ರಾಜಶೇಖರ ಹೇಳಿದರು.
ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಯ ನಾಯಕರಾದ ಮಾಜಿ ಜಿಲ್ಲಾ ರಾಜ್ಯಪಾಲರಾದ ಡಾ. ಜಿ .ಎ.ರಮೇಶ್,ಲಯನ್ ಎಮ್.ಎನ್.ಜೈಪ್ರಕಾಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಹೆಚ್ ವೆಂಕಟೇಶ್ ,ನಂದೀಶ್ ,ಕಾರ್ಯಪ್ಪ, ಜಯಕುಮಾರ್ ,ಸಿ.ಆರ್.ದಿನೇಶ್ ಮುಂತಾದವರು ಎಂ.ಸಿದ್ದೇಗೌಡ ಅವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು
