ಮೈಸೂರು: ಹುಣಸೂರು ಸಮೀಪ ತೋಟದ ಮನೆಯಲ್ಲಿ ಕೋಟ್ಯಂತರ ರೂ.ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಪ್ರಕರಣ ಸಂಬಂಧ ಪೊಲೀಸರ ಒಂದು ತಂಡ ಮುಂಬೈಗೆ ತೆರಳಿದೆ.
ಹುಣಸೂರಿನ ರತ್ನಪುರಿ ಬಳಿ ದಾಸನ ಪುರ ತೋಟದ ಮನೆಯ ಮೇಲೆ ದಾಳಿ ನಡೆಸಿದ್ದ ಜಿಲ್ಲಾ ಪೊಲಿಸರ ತಂಡ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿತ್ತು.
ಮಾದಕ ವಸ್ತುಗಳನ್ನು ಜಿಲ್ಲಾ ಪೊಲೀಸರು ನ್ಯಾಯಾಲಯಕ್ಕೆ ತೆರಳಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಅವುಗಳನ್ನು ಎಫ್ಎಸ್ಎಲ್ ವಿಭಾಗಕ್ಕೆ ರವಾನಿಸಿದ್ದರು.
ಇಬ್ಬರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಅವರುಗಳ ಸಿಮ್ ಕಾರ್ಡ್ಗಳ ಪರಿಶೀಲನೆ ನಡೆಸಿದ ವೇಳೆ ಆರೋಪಿಗಳ ಸಂಪರ್ಕದಲ್ಲಿ ಇದ್ದ ಇಬ್ಬರು ಮುಂಬೈನಲ್ಲಿ ನೆಲೆಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದೆ.
ಎಸ್ಪಿ ಅವರ ಸೂಚನೆ ಮೇರೆಗೆ ಐದು ಮಂದಿ ಪೊಲೀಸ್ ಅಧಿಕಾರಿಗಳ ತಂಡ ಮುಂಬೈಗೆ ತೆರಳಿದೆ. ಈ ವೇಳೆ ಅವರ ವಿಳಾಸವನ್ನೂ ಪಡೆದಿರುವ ಪೊಲೀಸರು, ಅಲ್ಲಿನ ಪೊಲೀಸ್ ಅಧಿಕಾರಿಗಳ ನೆರವಿನಲ್ಲಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಎಲ್ಲಾ ಸರಿಹೋದರೆ ಮುಂಬೈನಿಂದ ಮತ್ತಿಬ್ಬರು ಆರೋಪಿಗಳನ್ನು ಶೀಘ್ರ ಮೈಸೂರಿಗೆ ಕರೆತರಲಿದ್ದಾರೆ.
