ಮೈಸೂರು: ವಿದ್ಯುತ್ , ಆಸ್ತಿ, ನೀರಿನ ದರ ಏರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮೈಸೂರಿನ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಅಡುಗೆ ಅನಿಲ ಸಂಕಷ್ಟ ಎದುರಿಸುತ್ತಿರುವ ಜನತೆಗೆ, ರಾಜ್ಯ ಸರ್ಕಾರ ಹೊಸ ಆರ್ಥಿಕ ವರ್ಷದಿಂದ ವಿದ್ಯುತ್ ಗೆ 40 ರಿಂದ 50 ಪೈಸೆ ಹೆಚ್ಚಳ ಮಾಡಿದೆ,ಜೊತೆಗೆ ನೀರಿನ ದರ ಏರಿಕೆಯನ್ನು ಅಧಿಕೃತವಾಗಿ ಪ್ರಕಟಿಸಿ, ಆಸ್ತಿ ತೆರಿಗೆಯನ್ನು ಹೆಚ್ಚಿಸಲು ನಿರ್ಧರಿಸುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಪ್ರತಿಭಡನಾ ನಿರತರು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ, ಬಿಟ್ಟಿ ಭಾಗ್ಯಗಳಿಗಾಗಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ, ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಸೇರಿದಂತೆ ಎಲ್ಲದರ ಬೆಲೆಗಳನ್ನು ಏರಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಇವರ ಅಧಿಕಾರ ದಾಹಕ್ಕಾಗಿ ರಾಜ್ಯವನ್ನು, ರಾಜ್ಯದ ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈಗಾಗಲೇ ರಾಜ್ಯದ ಜನತೆ ಮಧ್ಯಪ್ರಾಚ್ಯದ ಯುದ್ಧದಿಂದಾಗಿ, ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಕೊರತೆಯಿಂದಾಗಿ ಪರಿತಪಿಸುತ್ತಿದ್ದಾರೆ. ಮುಂದೆ ಪೆಟ್ರೋಲ್, ಡೀಸೆಲ್ ಕತೆ ಏನೋ ಎಂದು ಆತಂಕದಲ್ಲಿದ್ದಾರೆ.
ಇಂತಹ ಸಂಕಷ್ಟ ಸಮಯದಲ್ಲಿ ರಾಜ್ಯ ಸರ್ಕಾರ ಬೆಲೆಗಳನ್ನು ಏಕಾಏಕಿ ಏರಿಸಿ ಜನತೆಗೆ ಶಾಕ್ ನೀಡಿದೆ, ಇದರ ಜೊತೆಗೆ ಹಾಲಿನ ಬೆಲೆ ಏರಿಕೆಯ ಸುಳಿವನ್ನು ನೀಡಿರುವುದು ರಾಜ್ಯದ ಜನತೆಗೆ ನುಂಗಲಾರದ ತುತ್ತಾಗಿದೆ.
ಇವೆಲ್ಲವುಗಳ ಜೊತೆಗೆ ಪಾಲಿಕೆಯು, ಪಾಲಿಕೆಯ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಮನೆಗಳಿಗೆ (ಪಿಐಡಿ) ಆಸ್ತಿ ಗುರುತಿನ ಸಂಖ್ಯೆ ಆಧಾರದ ಮೇಲೆ ದ್ವಿಚಕ್ರ ವಾಹನಕ್ಕೆ 100 ರೂ. ತ್ರಿಚಕ್ರ ವಾಹನಗಳಿಗೆ 200 ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 500 ರೂ. ಮೋಟಾರ್ ವಾಹನ ಉಪಕರ ವಿಧಿಸಲು ಹೊರಟಿರುವುದು ಅವೈಜ್ಞಾನಿಕ ಹಾಗೂ ಅತ್ಯಂತ ಖಂಡನೀಯ ಎಂದು ಈ ವೇಳೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಕಿಡಿಕಾರಿದರು.
ರಾಜ್ಯ ಸರ್ಕಾರ ಈ ಬೆಲೆಗಳನ್ನು ಹೆಚ್ಚಿಸುವ ಮೊದಲು, ಜನತೆಗೆ ಒಳ್ಳೆಯ ರಸ್ತೆಗಳನ್ನು ಕೊಡಲಿ, ಒಳಚರಂಡಿ ವ್ಯವಸ್ಥೆಗಳನ್ನು ಕಲ್ಪಿಸಿ, ಕುಡಿಯುವ ನೀರು ಮೂಲಭೂತ ಸೌಕರ್ಯಗಳನ್ನು ನೀಡಲಿ, ಅದನ್ನು ಬಿಟ್ಟು ಜನರಿಂದ ತೆರಿಗೆ ಹೆಸರಿನಲ್ಲಿ ಲೂಟಿ ಮಾಡುವುದನ್ನು ಬಿಡಬೇಕು ಹಾಗೂ ಕೂಡಲೇ ಏರಿಸಿರುವ ದರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ಕೃಷ್ಣಪ್ಪ, ಪ್ರಭುಶಂಕರ್, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ಶ್ರೀನಿವಾಸ್, ನೇಹಾ, ಮಂಜುಳಾ, ಸೌಮ್ಯ, ಸುಜಾತ, ನರಸಿಂಹೇಗೌಡ, ತಾಯೂರು ಗಣೇಶ್, ವಿಜಯೇಂದ್ರ, ಪ್ರಭಾಕರ್, ರಾಧಾಕೃಷ್ಣ, ನಾರಾಯಣಗೌಡ, ದರ್ಶನ್ ಗೌಡ, ಪ್ರದೀಪ್, ಕುಮಾರ್, ಕುಮಾರ್ ಗೌಡ, ಬಸವರಾಜು, ಪರಿಸರ ಚಂದ್ರು, ಅಶೋಕ್, ತ್ಯಾಗರಾಜ್, ನಾಗರಾಜು, ಗಣೇಶ ಪ್ರಸಾದ್, ಶಿವರಾಮಗೌಡ, ಚಂದ್ರಶೇಖರ್, ರವಿನಾಯಕ್, ರವೀಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
