ಮಡಿಕೇರಿ,ಏ.1: ಸಿದ್ದಾಪುರದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಮಾಲ್ದಾರೆ ಗ್ರಾಮ ಸಮೀಪದ ಕುಶಾಲನಗರ ಹಾಗೂ ದೇವಮತಿ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ಹುಲಿ ಕಾಣಿಸಿಕೊಂಡಿದೆ.
ಮೈಸೂರಿನತ್ತ ಪ್ರಯಾಣಿಸುತ್ತಿದ್ದ ವಾಹನ ಸವಾರರು ಆತಂಕದ ನಡುವೆಯೂ ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದಿದ್ದಾರೆ.
ಅರಣ್ಯ ಪ್ರದೇಶವಾಗಿರುವುದರಿಂದ ವಾಹನ ಸವಾರರು ಕ್ಷಣಕಾಲ ನಿಂತು ಹುಲಿಯನ್ನು ನೋಡಿದ್ದಾರೆ, ಕೆಲ ಹೊತ್ತಿನ ನಂತರ ಅದು ಮರಗಳ ಮಧ್ಯೆ ಮರೆಯಾಗಿದೆ.
ಮೈಸೂರಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ರಾತ್ರಿ ವೇಳೆ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
