(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಅತಿ ವೇಗವಾಗಿ ಚಲಿಸುತ್ತಿದ್ದ ಕಾರಿನ ಟೈಯರ್ ಸಿಡಿದು ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಹಳೆ ಹಂಪಾಪುರ ಗ್ರಾಮದ ನಿವಾಸಿ ಹಾಗೂ ನಿರ್ಮಿತಿ ಕೇಂದ್ರದ ನೌಕರ ಡಿ ಶಾಂತರಾಜು ಗಂಭೀರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಾಮರಾಜನಗರ ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ ಸೈಟ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಾಂತರಾಜು ಅವರು ಎಂದಿನಂತೆ ತಾಲ್ಲೂಕಿನ ಆಲಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿಕೊಂಡು ಸೋಮವಾರ ತಮ್ಮ ಬೈಕ್ ನಲ್ಲಿ ಬರುತ್ತಿದ್ದರು.
ಈ ವೇಳೆ ಉತ್ತಂಬಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂಬದಿಯಿಂದ ಅತಿ ವೇಗವಾಗಿ ಬರುತ್ತಿದ್ದ ಕೆ.ಎ.13 ಪಿ 5903 ಸಂಖ್ಯೆಯ ನೆಕ್ಷಾನ್ ಕಾರಿನ ಟೈಯರ್ ಸಿಡಿದು ನಿಯಂತ್ರಣ ತಪ್ಪಿ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದೆ, ಬೈಕ್ ಸವಾರನಿಗೆ ತಲೆ, ಬಲಭುಜ, ಮೊಣ ಕೈ ಹಾಗೂ ಪಕ್ಕೆಲಬಿಗೆ ಗಂಭೀರವಾಗಿ ಗಾಯವಾಗಿ ಕುಸಿದು ಬಿದ್ದಿದ್ದಾರೆ.
ಸ್ಥಳೀಯರು ಕೂಡಲೇ ಆಂಬುಲೆನ್ಸ್ ಮೂಲಕ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಂಬಳ್ಳಿ ಪೊಲೀಸರು ಕಾರನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
