ಮೈಸೂರು: ದಕ್ಷಿಣಕಾಶಿ ನಂಜನಗೂಡಿನಲ್ಲಿ ದೊಡ್ಡಜಾತ್ರಾ ಸಂಭ್ರಮಕ್ಕೆ ತೆರೆಬಿದ್ದಿದೆ.ಲಕ್ಷಾಂತರ ಭಕ್ತರು ಆಗಮಿಸಿದ್ದರಿಂದ ಎತ್ತ ನೋಡಿದರತ್ತ ಕಸದ ರಾಶಿ…
ದೊಡ್ಡಜಾತ್ರೆಗೆ ತೆರೆಬೀಳುತ್ತಿದ್ದಂತೆಯೇ ಪೌರಕಾರ್ಮಿಕರಿಗೆ ಸ್ವಚ್ಛತೆ ಒಂದು ಸವಾಲಾಗಿತ್ತು.
ಲಕ್ಷಾಂತರ ಭಕ್ತರು ಬಿಸಾಡಿದ ಕಸದ ರಾಶಿಯನ್ನ ತೆರುವುಗೊಳಿಸಿ ಸ್ವಚ್ಛಗೊಳಿಸುವುದು ಪೌರಕಾರ್ಮಿಕರ ಜವಾಬ್ದಾರಿ ಕೂಡಾ,ಹಾಗಾಗಿ ಬೆಳಗಿನಿಂದಲೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು.
ವಿಶೇಷವೆಂದರೆ ಸ್ಥಳೀಯ ಶಾಸಕ ದರ್ಶನ್ ಧೃವನಾರಾಯಣ್ ಕೂಡಾ ಪೌರ ಕಾರ್ಮಿಕರೊಂದಿಗೆ ಸ್ವಚ್ಛತೆಗಿಳಿದದ್ದು.
ದೇವಾಲಯದ ಸಮೀಪ ಎಲ್ಲೆಂದರಲ್ಲಿ ಬಿಸಾಡಿದ್ದ ಕಸದ ರಾಶಿ ತೆರುವುಗೊಳಿಸುತ್ತಿದ್ದ ಪೌರಕಾರ್ಮಿಕರಿಗೆ ಶಾಸಕ ದರ್ಶನ್ ಧೃವನಾರಾಯಣ್ ಸಾಥ್ ನೀಡಿ ಸ್ವಚ್ಛತೆಗೆ ಮುಂದಾದರು.
ಕೈಗಳಿಗೆ ಗ್ಲೌಸ್ ಧರಿಸಿ,ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆ ಮಾಡಿ ಕಸ ತೆಗೆದು ಮೊರಗಳಿಗೆ ತುಂಬಿದರು.
ದರ್ಶನ್ ದೃವನಾರಾಯಣ್ ಅವರ ಕಾರ್ಯ ನಿಜಕ್ಕೂ ಮಾದರಿಯಾಗಿದೆ.ಅವರ ಕಾರ್ಯ ಕಂಡ ಕಾರ್ಯಕರ್ತರು ಕೂಡಾ ಜೊತೆಗೂಡಿ ಸ್ವಚ್ಛತೆಗೆ ಮುಂದಾದರು.
ಶ್ರಮಜೀವಿಗಳಾದ ಪೌರಕಾರ್ಮಿಕರ ಜೊತೆ ಶ್ರಮದಾನ ಮಾಡಿದ ದರ್ಶನ್ ಧೃವನಾರಾಯಣ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು,ಇತರರಿಗೆ ಮಾದರಿಯಾಗಿದ್ದಾರೆ.
ಕಳೆದ ವರ್ಷ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಂಸದರೂ,ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡಾ ತಮ್ಮ ಪತ್ನಿಯೊಂದಿಗೆ ಹೀಗೆಯೇ ಸ್ವಚ್ಛತೆ ಮಾಡುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು.
