ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ಪಾದದ ಬಳಿ ಇರುವ ‘ಚಾಮುಂಡಿ ಫಾರಂ’ನಲ್ಲಿ, ಶ್ರೀ ಉತ್ತರಾದಿ ಮಠದ ಶ್ರೀಗಳು ಮೇ ತಿಂಗಳಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ‘ತುಳಸಿ ವನ’ ನಿರ್ಮಾಣ ಕಾರ್ಯಕ್ಕೆ ಶಾಸಕ ಟಿ ಎಸ್ ಶ್ರೀವತ್ಸ ಅವರ ಸಮ್ಮಖದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಈ ಪ್ರದೇಶದಲ್ಲಿ ಸುಮಾರು ಎರಡು ಸಾವಿರ ತುಳಸಿ ಗಿಡಗಳನ್ನು ನೆಡುವ ಮೂಲಕ ಬೃಹತ್ ವನವನ್ನು ನಿರ್ಮಿಸಲಾಗುತ್ತಿದೆ.
ಈ ಪುಣ್ಯಕಾರ್ಯಕ್ಕಾಗಿ ಸ್ಥಳದ ಮಾಲೀಕರಾದ ಜಾಂಬವತಿ ಶ್ರೀಧರ್ ಅವರು ತಮ್ಮ ಜಾಗವನ್ನು ಸಮತಟ್ಟುಗೊಳಿಸಿ, ನೀರಿನ ವ್ಯವಸ್ಥೆಯನ್ನು ಅಳವಡಿಸಿ ಕೊಡುಗೆಯಾಗಿ ನೀಡಿದ್ದಾರೆ.
ಶ್ರೀ ಉತ್ತರಾದಿ ಮಠದ ಶ್ರೀ ಧನ್ವಂತ್ರಿ ಆರಾಧಕರಾದ ಶ್ರೀ ಅನಿರುದ್ಧಾಚಾರ್ಯರ ದಿವ್ಯ ನೇತೃತ್ವದಲ್ಲಿ, ಗಣ್ಯರ ಸಮ್ಮುಖದಲ್ಲಿ ಈ ಧಾರ್ಮಿಕ ಕಾರ್ಯ ನೆರವೇರಿತು.
ತುಳಸಿಯು ಭಗವಾನ್ ಶ್ರೀಮನ್ನಾರಾಯಣನಿಗೆ ಅತ್ಯಂತ ಪ್ರಿಯವಾದ ಹಾಗೂ ಶ್ರೇಷ್ಠ ಆಯುರ್ವೇದೀಯ ಗುಣಗಳನ್ನು ಹೊಂದಿರುವ ಪವಿತ್ರ ಸಸ್ಯ. ಪ್ರತಿದಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರಿಗೆ ಈ ತುಳಸಿ ವನದಿಂದ ಹೊರಹೊಮ್ಮುವ ತಂಪಾದ ಮತ್ತು ಶುದ್ಧ ಗಾಳಿಯು ಉತ್ತಮ ಆರೋಗ್ಯ ಹಾಗೂ ಆಹ್ಲಾದಕರ ವಾತಾವರಣವನ್ನು ಒದಗಿಸಲಿದೆ.
