ಮೈಸೂರು: ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಮೈಸೂರು ಹಾಗೂ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಸಂಯುಕ್ತ ಆಶ್ರಯದಲ್ಲಿ, ಕೆ.ಜಿ. ಕೊಪ್ಪಲು ಮರುಳೇಶ್ವರ ಧರ್ಮದರ್ಶಿ ಟ್ರಸ್ಟ್ (ರಿ) ಸಹಕಾರದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಅಧ್ಯಕ್ಷರಾದ ಶೋಭಾ ರಮೇಶ್ ವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು, ಸಂಸ್ಥೆಯ ವಿವಿಧ ಸಾಮಾಜಿಕ ಚಟುವಟಿಕೆಗಳು ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಕೈಗೊಂಡಿರುವ ಶಿಬಿರಗಳು ಮತ್ತು ಕಾರ್ಯಕ್ರಮಗಳನ್ನು ವಿವರಿಸಿದರು.
ಡಾ. ಶ್ವೇತಾ ಸದಾನಂದ್ ಅವರು ಮಹಿಳಾ ಆರೋಗ್ಯದ ಮಹತ್ವವನ್ನು ಒತ್ತಿಹೇಳಿ, ಪ್ರತಿಯೊಬ್ಬ ಮಹಿಳೆಯೂ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಸಂಧ್ಯಾ ಮಂಜುನಾಥ್ ಅವರು ಮಹಿಳೆಯರು ಇಂದಿನ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗೈದು ಮುನ್ನಡೆಯುತ್ತಿರುವುದನ್ನು ಉಲ್ಲೇಖಿಸಿ, ಇನ್ನೂ ಉನ್ನತ ಸಾಧನೆಗಳತ್ತ ಹೆಜ್ಜೆ ಹಾಕಬೇಕೆಂದು ಪ್ರೇರೇಪಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಡಾ. ಕಾವ್ಯಶ್ರೀ ಎಚ್.ಎಸ್ (ಎಂ.ಎಂ.ಸಿ.ಆರ್.ಐ), ಕುಸುಮ ಜಿ (ಕೆಪಿಸಿಎಲ್), ಕುಮಾರಿ ಸಹನಾ ಗೌಡ (ಸಮೃದ್ಧಿ ವಾರ್ತೆ),ಸವಿತ (ಪ್ರಗತಿಪರ ರೈತ), ಹಾಗೂ ರಂಜಿತಾ ಸಿದ್ದೇಶ್ ಕುಮಾರ್ (ಉದ್ಯಮಿ) ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕಾಗಿ ನೃತ್ಯ, ಭಾವಗೀತೆ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಇದೇ ವೇಳೆ, ಅಗತ್ಯವಿರುವವರಿಗೆ ಉಚಿತ ವೀಲ್ಚೇರ್ಗಳನ್ನು ವಿತರಿಸುವ ಮೂಲಕ ಮಾನವೀಯ ಸೇವೆಯನ್ನೂ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷೆ ಸುನಂದ, ಕಾರ್ಯದರ್ಶಿ ರಾಣಿ ಮಹೇಶ್, ಖಜಾಂಚಿ ಶ್ರುತಿ ರಾಣಿ ತೇಜಸ್ ಸೇರಿದಂತೆ ನಿರ್ದೇಶಕರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ರವಿಕುಮಾರ್ ಹಾಗೂ ಮರುಳೇಶ್ವರ ಟ್ರಸ್ಟ್ ಅಧ್ಯಕ್ಷ ಡಾ. ಎಂ. ಮಹಾದೇವಯ್ಯ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
