ಮೈಸೂರು: ಸಮಾಜದ ಮುಖ್ಯವಾಹಿನಿ ಯಿಂದ ಹೊರಗುಳಿದವರು ಮತ್ತು ನಿರ್ಲಕ್ಷಿತರ ಕಡೆ ಸಹಾನುಭೂತಿ ಹೊಂದುವುದು ಅಗತ್ಯವಿದೆ.
ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದು ಮಹಾರಾಜ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ಸಂಚಾಲಕಿ ಪ್ರೊ. ರೇಖಾ ಕೆ. ಜಾದವ್ ತಿಳಿಸಿದರು.
ಮೈಸೂರಿನ ಮಹಾರಾಜ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕವು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಕಾಲೋನಿಯ ಸರ್ಕಾರಿ ಬುಡಕಟ್ಟು ವಾಲ್ಮೀಕಿ ಆಶ್ರಮ ಶಾಲೆ ಮತ್ತು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಪರಸ್ಪರ ಸಹಾಯಹಸ್ತ ಚಾಚಿದಲ್ಲಿ ಮನುಕುಲದ ಏಳ್ಗೆ ಸುಲಭ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಘಟಕದ ವತಿಯಿಂದ ಎರಡೂ ಶಾಲೆಗಳಲ್ಲೂ ಜ್ಯಾಮಿತಿ ಪೆಟ್ಟಿಗೆ ಮತ್ತು ಪುಸ್ತಕ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಲ್ಲದೆ ಗ್ರಾಮದಲ್ಲಿ ಜಾಥಾ ನಡೆಸಿ ಘೋಷಣೆ ಕೂಗುವ ಮೂಲಕ ಆರೋಗ್ಯ, ಶಿಕ್ಷಣ ಹಾಗೂ ಪರಿಸರದ ಕುರಿತು ಜಾಗೃತಿ ಮೂಡಿಸಲಾಯಿತು.
ಸದಸ್ಯರಾದ ಡಾ. ಶ್ವೇತಾ ಎಮ್. ಹನ್ಸ್, ಡಾ. ದಿನಮಣಿ ಬಿ. ಎಸ್, ಡಾ. ಸೋಮಲತ ಕೆ. ಸಿ, ಪುನೀತ್ ಸಿ. ಎಮ್, ದಿನೇಶ್ ರಾವ್, ಅಭಿಷೇಕ್ ಮತ್ತು ಅಧ್ಯಾಪಕರಾದ ಡಾ. ಕಲ್ಯಾಣ ಕುಮಾರಿ, ಡಾ. ರೋಹಿಣಿ, ಡಾ. ಸುವರ್ಣದೇವಿ ಬಿ. ಕೆ , ಎಂಬತ್ತಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂ ಸೇವಕರು ಮತ್ತು ಗ್ರಾಮದ ಮುಖಂಡರು ಹಾಜರಿದ್ದರು.
