ಮೈಸೂರು: ಹನುಮಂತಯ್ಯ ಅವರು ರಾಷ್ಟ್ರ, ರಾಜ್ಯ ಕಂಡ ಅಪರೂಪದ ಪ್ರಾಮಾಣಿಕ, ನಿಷ್ಠಾವಂತ, ಸರಳ ವ್ಯಕ್ತಿತ್ವದ ರಾಜಕಾರಣಿ ಎಂದು ಶ್ರೇಷ್ಠ ವಿಜ್ಞಾನಿಗಳು ಹಾಗೂ ಮೈಸೂರು ವಿವಿ ವಿಶ್ರಾಂತ ಕುಲುಪತಿ ಕೆ.ಎಸ್ ರಂಗಪ್ಪ ಅವರು ಬಣ್ಣಿಸಿದರು.
ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ಏಕೀಕರಣದ ರೂವಾರಿ, ವಿಧಾನ ಸೌಧದ ಶಿಲ್ಪಿ, ಮಾಜಿ ಮುಖ್ಯಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಂಗಲ್ ಹನುಮಂತಯ್ಯ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಖಂಡ ಕರ್ನಾಟಕ ರಚನೆ ಮಾಡುವುದರಲ್ಲಿ ಕೆಂಗಲ್ಲರ ಪಾತ್ರ ಪ್ರಮುಖವಾದದ್ದು. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕ ಎಲ್ಲವನ್ನು ಮೈಸೂರು ಪ್ರಾಂತ್ಯಕ್ಕೆ ಒಗ್ಗೂಡಿಸಿ ಇತಿಹಾಸ ನಿರ್ಮಿಸಿದರು. ಅವರ ಜಯಂತಿಯನ್ನು ಸರ್ಕಾರ ಜಿಲ್ಲಾಡಳಿತದ ವತಿಯಿಂದ ಆಚರಣೆ ಮಾಡಬೇಕು ಎಂದು ರಂಗಪ್ಪ ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಒಂಬತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕರಾದ ಎಂ.ಕೆ ಸೋಮಶೇಖರ್ ಅವರು ಶ್ರೀ ಕೆಂಗಲ್ ಹನುಮಂತಯ್ಯ ರವರ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ನಂತರ ಆಶೀರ್ವಚನ ನೀಡಿದ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪೂಜ್ಯ ಜಗದ್ಗುರು ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಅವರು ಮಾತನಾಡಿ, ದೇಶದಲ್ಲೇ ಎಲ್ಲೂ ಇಲ್ಲದ ಭವ್ಯ ವಿಧಾನಸೌಧವನ್ನು ನಿರ್ಮಿಸಿರುವ ಕೆಂಗಲ್ ಹನುಮಂತಯ್ಯನವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಸಲಹೆ ನೀಡಿದರು.
ಕನ್ನಡಪರ ಹೋರಾಟಗಾರರು ಏಕೀಕರಣಕ್ಕಾಗಿ ಶ್ರಮಿಸಿದ ಕೆಂಗಲ್ ಹನುಮಂತಯ್ಯ ಅವರನ್ನು ನೆನೆಯಲೇಬೇಕು. ಇಂದಿನ ಯುವಕರಿಗೆ, ಯುವ ರಾಜಕಾರಣಿಗಳಿಗೆ ಕೆಂಗಲ್ ಹನುಮಂತಯ್ಯ ಅವರ ತತ್ವ ಆದರ್ಶಗಳನ್ನು ತಿಳಿಹೇಳಿ ಯುವಕರು ರಾಜಕಾರಣಕ್ಕೆ ಬರಲು , ಬಂದು ಸೇವೆಯನ್ನು ಮಾಡಲು ಪ್ರೇರೇಪಿತರಾಗಬೇಕು. ಕರ್ನಾಟಕ ಸೇನಾ ಪಡೆ, ಕೆಂಗಲ್ ಹನುಮಂತಯ್ಯ ಅವರ ಜಯಂತಿ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕೆಂಗಲ್ ಹನುಮಂತಯ್ಯ ಅವರ ಭಾವಚಿತ್ರಕ್ಕೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ. ಬಿ.ಜೆ ವಿಜಯಕುಮಾರ್ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ ಗಂಗಾಧರ್, ಕರ್ನಾಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ ರಂ ಶ್ರೀನಿವಾಸ ಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕೆ ಎನ್ ನಾಗೇಗೌಡ, ಪ್ರಭುಶಂಕರ, ಕೃಷ್ಣಪ್ಪ, ಪ್ರಜೀಶ್, ಹನುಮಂತಯ್ಯ, ನೇಹಾ, ಭಾಗ್ಯಮ್ಮ, ಅಂಬಾ ಅರಸ್, ಸುಜಾತಾ, ಕೆ.ಪಿ ನಾಗಣ್ಣ, ರಾಧಾಕೃಷ್ಣ, ಪ್ರಭಾಕರ್, ಶಿವರಾಂ, ನಾರಾಯಣ ಗೌಡ, ತ್ಯಾಗರಾಜ್, ಗಣೇಶ್ ಪ್ರಸಾದ್, ಚಂದ್ರಶೇಖರ್, ಕೃಷ್ಣೇಗೌಡ, ಶ್ರೀನಿವಾಸ್, ಕುಮಾರ್, ರಘು ಅರಸ್, ಗೀತಾ ಗೌಡ, ಬಸವರಾಜು, ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.
