
ಹುಣಸೂರು: ಹುಣಸೂರಿದ ಹೃದಯ ಭಾಗದಲ್ಲಿರುವ ರೇಷ್ಮೆ ಗೂಡು ಮಾರುಕಟ್ಟೆ ಈಗ ಕುಡುಕರು ಮತ್ತು ಜುಜುಕೋರರ ಅಡ್ಡೆಯಾಗಿ ಪರಿಣಮಿಸಿದೆ.
ಸುಮಾರು ಮೂರು ದಶಕಗಳ ಹಿಂದೆ ಹುಣಸೂರಿನ ರೇಷ್ಮೆ ಇಲಾಖೆಯ ರೇಷ್ಮೆ ಗೂಡು ಮಾರುಕಟ್ಟೆ ಚೆನ್ನಾಗಿಯೇ ನಡೆಯುತ್ತಿತ್ತು. ಬೇರೆ ಬೇರೆ ಜಿಲ್ಲೆಗಳಿಂದಲೂ ರೇಷ್ಮೆ ಗೂಡುಗಳನ್ನು ತಂದು ಎಲ್ಲಿ ಮಾರಾಟ ಮಾಡುತ್ತಿದ್ದರು. ನಂತರ ಅದೇನಾಯಿತೊ ತಿಳಿಯದು ರೇಷ್ಮೆ ಮಾರುಕಟ್ಟೆಯನ್ನು ಮುಚ್ಚಿ ಬೇರೆ ಜಿಲ್ಲೆಗೆ ಸ್ಥಳಾಂತರಿಸಲಾಯಿತು.
ಆದರೆ ಈಗ ಈ ಮಾರುಕಟ್ಟೆ ಕುಡುಕರ ಮತ್ತು ಜೂಜುಕೋರರ ಅಡ್ಡೆಯಾಗಿದೆ. ಇದಕ್ಕೆ ಹೊಂದಿಕೊಂಡಂತೆ ರೇಷ್ಮೆ ಇಲಾಖೆ ಕಚೇರಿ ಇದೆ, ಸಿಬ್ಬಂದಿಗಳು ಇದ್ದಾರೆ, ಆದರೆ ಇದರಿಂದ ರೈತರಿಗೆ ಅನುಕೂಲ ಆಗುತ್ತಿದೆಯೊ ಇಲ್ಲವೋ ಅವರಿಗೇ ಗೊತ್ತು.
ಸಂಜೆ 6 ಗಂಟೆ ಆದರೆ ಸಾಕು ಈ ರೇಷ್ಮೆ ಗೂಡು ಮಾರುಕಟ್ಟೆಯೊಳಗೆ ಕುಡುಕರು ಮತ್ತು ಇಸ್ಪೀಟ್ ಆಡುವವರು ಜಾಲಿಯಾಗಿ ಆಟ ಆಡಿಕೊಂಡಿರುತ್ತಾರೆ. ಇದನ್ನು ಯಾರಾದರೂ ಕೇಳಲು ಹೋದರೆ ಧಮ್ಕಿ ಹಾಕಿ ಶಾಪ ಹಾಕುತ್ತಾರೆ.
ಕೆಲವೊಮ್ಮೆ ಹಲ್ಲೆ ಮಾಡಲು ಮುಂದಾದ ಘಟನೆಗಳು ನಡೆದಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲ್ಲೂಕು ಅಧ್ಯಕ್ಷ ಚೆಲುವರಾಜು ಅವರು ವರ್ಷಿಣಿ ನ್ಯೂಸ್ ವೆಬ್ ಸೈಟ್ ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.
ಹುಣಸೂರಿನಲ್ಲಿ ಬಹಳಷ್ಟು ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ ಇದಕ್ಕಾಗಿಯೇ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತಿದೆ.
ಹೀಗೆ ಸರ್ಕಾರದ ಖಜಾನೆಯ ಹಣ ಪೋಲಾಗುವ ಬದಲು ಹೇಗೂ ರೇಷ್ಮೆ ಕೃಷಿ ಮಾರುಕಟ್ಟೆ ಕಟ್ಟಡ ಶಿಥಿಲವಾಗಿ ಗೋಡೆಗಳು ಕಿಟಕಿಗಳು ಉದುರಿ ಹೋಗುತ್ತಿದೆ ಹಾಗಾಗಿ ಇದನ್ನು ಸಂಪೂರ್ಣವಾಗಿ ಕೆಡವಿ ಇಲ್ಲಿ ಸುಸಜ್ಜಿತವಾದ ಕಟ್ಟಡವನ್ನು ಕಟ್ಟಬೇಕು. ಖಾಸಗಿಯವರಿಗೆ ಬಾಡಿಗೆ ಕೊಟ್ಟು ಹಣ ಪೋಲು ಮಾಡುವ ಬದಲು ಸರ್ಕಾರಿ ಕಚೇರಿಗಳು ಸುಸಜ್ಜಿತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಬಹುದಲ್ಲವೇ ಎಂದು ಚೆಲುವರಾಜು ಹೇಳಿದ್ದಾರೆ.
ಇದು ಸತ್ಯ. ಏಕೆಂದರೆ ಪ್ರತಿ ತಿಂಗಳು ಖಾಸಗಿ ಕಟ್ಟಡಗಳಿಗೆ ಬಾಡಿಗೆ ತೆತ್ತು ಸರ್ಕಾರಿ ಕಚೇರಿ ನಡೆಸಲು ವೆಚ್ಚವಾಗುತ್ತಿರುವುದು ಸಾರ್ವಜನಿಕರ ತೆರಿಗೆ ಹಣ.
ಹೀಗೆ ಒಂದು ಕಟ್ಟಡ ಪಾಳು ಬೀಳುವ ಬದಲು ಅದನ್ನು ಕೆಡವಿ ಹೊಸ ಕಟ್ಟಡ ಕಟ್ಟಬಹುದಾಗಿತ್ತು,ಇನ್ನೂ ಕಾಲ ಮಿಂಚಿಲ್ಲ ಈಗಿನ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಮಂತ್ರಿಗಳು,ಅಧಿಕಾರಿಗಳು ರೇಷ್ಮೆ ಗೂಡು ಮಾರುಕಟ್ಟೆ ಕಟ್ಟಡವನ್ನು ಕೆಡವಿ ಹೊಸದಾದ ಕಟ್ಟಡವನ್ನು ಕಟ್ಟಿ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಲಿ ಎಂದು ಚೆಲುವರಾಜು ಸಲಹೆ ನೀಡಿದ್ದಾರೆ.
ಹೀಗೆ ಆಗದಿದ್ದರೆ ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟು ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
