ಮೈಸೂರು: ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊ. ಕೆ. ರಾಮಕೃಷ್ಣಯ್ಯ ಅವರು ನೇಮಕವಾಗಿದ್ದಾರೆ.
ನಾಡಿನ ಖ್ಯಾತ ರಂಗಕರ್ಮಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಪರ್ಫಾರ್ಮಿಂಗ್ ಆರ್ಟ್ಸ್ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಕೆ. ರಾಮಕೃಷ್ಣಯ್ಯ ಅವರು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೋಮವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕಿನವರಾದ ಪ್ರೊ. ಕೆ. ರಾಮಕೃಷ್ಣಯ್ಯ ಅವರು ಬೆಂಗಳೂರು ನೀನಾಸಂ ಪದವೀಧರರು, ಪ್ರದರ್ಶನ ಕಲಾ ವಿಭಾಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ.ಡ್ರಾಮ ಪದವಿ, ಪಿಹೆಚ್.ಡಿ ಪದವಿಯನ್ನು ಪಡೆದು, ಪ್ರಧ್ಯಾಪಕರಾಗಿ ವಿಶ್ವವಿದ್ಯಾಲಯದಲ್ಲಿ 25 ವರ್ಷಗಳ ಸುದೀರ್ಘ ಬೋಧನಾ ಅನುಭವ ಹೊಂದಿದ್ದಾರೆ.
ಅವರ ಮಾರ್ಗದರ್ಶನದಲ್ಲಿ 16 ಸಂಶೋಧಕರು ಪಿಎಚ್.ಡಿ ಪದವಿ ಪಡೆದಿದ್ದು, ರಂಗಭೂಮಿ ಕುರಿತಾದ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.
ನಟ, ಮತ್ತು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ನಾಲ್ಕು ನಾಟಕಗಳನ್ನು ರಚಿಸಿ ಪ್ರಕಟಿಸಿದ್ದಾರೆ.
2011ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸ್ಟೇಟ್ ಫೆಲೋಶಿಪ್ ಹಾಗೂ 2017ರಲ್ಲಿ ನಾಟಕ ಅಕಾಡೆಮಿಯ ರಾಜ್ಯ ಪ್ರಶಸ್ತಿಗೆ ಪ್ರೊ. ಕೆ. ರಾಮಕೃಷ್ಣಯ್ಯ ಅವರು ಭಾಜನರಾಗಿದ್ದಾರೆ.
ದೆಹಲಿಯಲ್ಲಿ ನಡೆದ 8ನೇ ಥಿಯೇಟರ್ ಒಲಿಂಪಿಕ್ಸ್ (2018) ಮತ್ತು ಅಹಮದಾಬಾದ್ನಲ್ಲಿ ನಡೆದ ಅಂತರಾಷ್ಟ್ರೀಯ ಭಾರತರಂಗ ಮಹೋತ್ಸವ 2024 ರಲ್ಲೂ ಅವರು ಭಾಗವಹಿಸಿದ್ದರು.
ಬೆಂಗಳೂರು ವಿಶ್ವವಿದ್ಯಾಲಯದ ಸಾಂಸ್ಕೃತಿಕ ಸಂಯೋಜಕರಾಗಿ 2017ರಿಂದ ಕಾರ್ಯನಿರ್ವಹಿಸುತ್ತಿದ್ದ ಅವರು, ಈ ಹಿಂದೆ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಆಗಿ ಹಾಗೂ ಪರ್ಫಾರ್ಮಿಂಗ್ ಆರ್ಟ್ಸ್ ವಿಭಾಗದ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ರಾಮಕೃಷ್ಣಯ್ಯ ಅವರ ಈ ಅನುಭವವು ಸಂಗೀತ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹೊಸ ದಿಕ್ಸೂಚಿ ನೀಡಲಿದೆ ಎಂದು ವಿವಿಗೆ ಸಂಬಂಧಪಟ್ಟವರ ನಿರೀಕ್ಷೆಯಾಗಿದೆ.
