ಬೆಂಗಳೂರು: ಬಿಜೆಪಿಯ ಇಬ್ಬರು ಶಾಸಕರ ವಿಷಯದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಅವರ ಪಕ್ಷದ ನಾಯಕರುಗಳ ಇತ್ತೀಚಿನ ನಡೆ ಖಂಡನೀಯ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಕೊಲೆ ಆರೋಪದಲ್ಲಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡು ಜೈಲು ಪಾಲಾಗಿರುವ ಕೆ. ಆರ್. ಪುರಂ ಶಾಸಕ ಬೈರತಿ ಬಸವರಾಜ ಹಾಗೂ ಹಣ ಪಡೆದುಕೊಳ್ಳುವಾಗಲೇ ನೇರವಾಗಿ ಲೋಕಾಯುಕ್ತ ಸಂಸ್ಥೆಗೆ ಸಿಕ್ಕಿಬಿದ್ದ ಶಾಸಕ ಚಂದ್ರು ಲಮಾಣಿ ಪ್ರಕರಣದಲ್ಲಿ ವಿಜಯೇಂದ್ರ ಹಾಗೂ ಅವರ ಪಕ್ಷದ ನಾಯಕರುಗಳ ಇತ್ತೀಚಿನ ನಡೆಯನ್ನು
ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಖಂಡಿಸಿದ್ದಾರೆ.
ಈ ಎರಡು ಪ್ರಕರಣಗಳಲ್ಲಿ ಆರೋಪಿಗಳು ನೇರವಾಗಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಕೊಲೆಯಂತಹ ಹಾಗೂ ಭ್ರಷ್ಟಾಚಾರ ಪ್ರಕರಣಗಳಲ್ಲಿ ಇಂತಹ ಕಳಂಕಿತರಿಂದ ತಕ್ಷಣ ರಾಜಿನಾಮೆ ಪಡೆದು ವಜಾ ಮಾಡುವುದನ್ನು ಬಿಟ್ಟು ವಿಜಯೇಂದ್ರ ಆರೋಪಿಗಳ ಮನೆಗೆ ದಂಡು ದಾಳಿಗಳ ಸಮೇತ ತೆರಳಿ ಸಾಂತ್ವನ ಹೇಳುತ್ತಿದ್ದಾರೆ. ಪ್ರಕರಣವನ್ನು ರಾಜಕೀಕರಣ ಹಾಗೂ ಜಾತೀಕರಣ ಗೊಳಿಸುತ್ತಿರುವ ಇವರ ನಡೆಯನ್ನು ಗಮನಿಸಿದರೆ ಇವರು ಭ್ರಷ್ಟಾಚಾರಿಗಳ ರಕ್ಷಕರೆಂಬುದು ಗೊತ್ತಾಗುತ್ತದೆ ಎಂದು ಸದಂ ಟೀಕಿಸಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ನಾಯಕರು ಸ್ವಲ್ಪವಾದರೂ ನೈತಿಕತೆ ಉಳಿಸಿಕೊಂಡಿದ್ದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಈ ಇಬ್ಬರು ಶಾಸಕರನ್ನು ಪಕ್ಷದಿಂದ ವಜಾ ಗೊಳಿಸಬೇಕು ಹಾಗೂ ಇವರ ಕುಕೃತ್ಯಗಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸಾಬೀತು ಪಡಿಸಬೇಕು ಎಂದು ಜಗದೀಶ್ ವಿ. ಸದಂ ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಹೇಳಿಕೆಯ ಅನುಸಾರ ನ್ಯಾಯಾಂಗ ತನಿಖೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ರಾಜ್ಯದಲ್ಲಿ ಪಕ್ಷಾತೀತವಾಗಿ ಶೇ 30 ರಿಂದ 40 ರಷ್ಟು ಶಾಸಕರು ಕಮಿಷನ್ ದಂಧೆ ಕೋರರಾಗಿದ್ದಾರೆ. ಕೆಲವರು ನೇರವಾಗಿ ಶಾಮಿಲಾಗಿದ್ದಾರೆ ಎಂಬ ಗುರುತರ ಆರೋಪವನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜಕ್ಕೂ ನೈತಿಕತೆ ಇದ್ದಲ್ಲಿ ಕೂಡಲೇ ಇವರ ಹೇಳಿಕೆಯನ್ನು ಆದರಿಸಿ ರಾಜ್ಯದಲ್ಲಿ ನಡೆಯುತ್ತಿರುವ ವ್ಯವಸ್ಥಿತ ಪರಮ ಭ್ರಷ್ಟಾಚಾರವನ್ನು ತಡೆಗಟ್ಟಲು ಕೂಡಲೇ ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಈ ಮೂಲಕ ರಾಜ್ಯದ ಜನತೆಗೆ ಉತ್ತರಧಾಯಿಗಳಾಗ
ಬೇಕೆಂದು ಜಗದೀಶ್ ವಿ .ಸದಂ ಆಗ್ರಹಿಸಿದ್ದಾರೆ.
