ಚನ್ನರಾಯಪಟ್ಟಣ: ಆಕೆ ಬಾಳಿ ಬದುಕಿ ಭವಿಷ್ಯದ ಕನಸು ಕಾಣುತ್ತಿದ್ದ ಕಂದಮ್ಮ..
ಕ್ರೂರ ದುರ್ವಿಧಿಯ ಅಟ್ಟಹಾಸಕ್ಕೆ ಮುಗ್ಧ ಪ್ರತಿಭೆ ಬಾರದ ಲೋಕಕ್ಕೆ ಪಯಣಿಸಿದ್ದಾಳೆ.
ಬೆಳೆಯುವ ಪೈರು ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಈ ಅನನ್ಯ ಪುಟಾಣಿ ಬಹುಮುಖ ಪ್ರತಿಭೆ ಕಾಲನ ಕರೆಗೆ ಹೋಗೇ ಬಿಟ್ಟಿದ್ದಾಳೆ.
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹೋಬಳಿ, ಚನ್ನೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ 10ನೇ ವಯಸ್ಸಿನ ಈ ಪುಟ್ಟ ಪೋರಿ ಪ್ರೇರಣ ಎಲ್ಲರಿಗೂ ಪ್ರೇರಣೆಯಾಗಿದ್ದಳು ಈಗ ಈಕೆ ಬ್ರೈನ್ ಹ್ಯಾಮರೆಜ್ ಗೆ ಬಲಿಯಾಗಿರುವುದು ಗೋರ ದುರಂತವೇ ಸರಿ.
ಕೇವಲ ಓದಿನ್ನಲ್ಲಷ್ಟೇ ಅಲ್ಲ ಆಟ, ಸಂಗೀತ ಸಾಂಸ್ಕೃತಿಕ ಚಟುವಟಿಕೆ, ನೃತ್ಯ, ಕಲೆ ಹೀಗೆ ಎಲ್ಲಾ ಪ್ರಕಾರಗಳಲ್ಲಿಯೂ ಚಟುವಟಿಕೆಯಿಂದ ಇದ್ದ ಪ್ರೇರಣ ಸಾವನ್ನಪ್ಪಿರುವುದು ಇಡೀ ಶಾಲೆ ಅಷ್ಟೇ ಅಲ್ಲ ಗ್ರಾಮಸ್ಥರಲ್ಲಿಯೂ ಕಂಬನಿ ಮಿಡಿಯುವಂತೆ ಮಾಡಿದೆ.
ಯಮ ಸ್ವರೂಪಿ ಬ್ರೈನ್ ಹೆಮರೇಜ್ ಎಂಬ ಮಾರಕ ಕಾಯಿಲೆ ಈಕೆ ಮೇಲೆರಗಿದ್ದು ಪೋಷಕರಷ್ಟೇ ಅಲ್ಲ, ಎಲ್ಲರನ್ನು ದುಃಖದ ಕಡಲಲ್ಲಿ ಮುಳುಗಿಸಿದೆ.ಈಗ ಚನ್ನೇನಹಳ್ಳಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ಈಕೆಯ ಅಚ್ಚುಮೆಚ್ಚಿನ ಶಿಕ್ಷಕರಾದ ಮಂಜೇಗೌಡರು ಮತ್ತು ವಾಣಿ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.
