ಮೈಸೂರು: ಮೈಸೂರಿನ ಜೆಕೆ ಟೈರ್ಸ್ ಅಂಡ್ ಇಂಡಸ್ಟ್ರೀಸ್‌ನ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಜೆಕೆ ಟೈರ್ಸ್ ಅಂಡ್ ಇಂಡಸ್ಟ್ರೀಸ್, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಂಸ್ಥೆ, ಕೆ.ಆರ್.ಆಸ್ಪತ್ರೆಯ ರಕ್ತನಿಧಿ ಕೇಂದ್ರ, ಲಯನ್ಸ್ ಕ್ಲಬ್ ಆಸರೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಜೆಕೆ ಟೈರ್ಸ್ ಉಪಾಧ್ಯಕ್ಷರು ವರ್ಕ್ಸ್ ಹಾಗೂ ಸಿಐಐ ಮೈಸೂರು ಚಾಪ್ಟರ್ ಮಾಜಿ ಅಧ್ಯಕ್ಷರಾದ ವಿ. ಈಶ್ವರ್ ರಾವ್ ಅವರ ಮಾರ್ಗದರ್ಶನದಲ್ಲಿ ಸುಮಾರು 1300 ಮಂದಿ ರಕ್ತದಾನ ಮಾಡಿದರು.

ಜೆಕೆ ಟೈರ್ಸ್ ಆಂಡ್ ಇಂಡಸ್ಟ್ರೀಸ್ ಸಂಸ್ಥೆ ವತಿಯಿಂದ -ಜೆಕೆ ಸಮೂಹ ಸಂಸ್ಥೆ ಅಧ್ಯಕ್ಷರಾಗಿದ್ದ ದಿವಂಗತ ಹರಿಶಂಕರ್ ಸಿಂಘಾನಿಯಾ ಅವರ ಜನ್ಮದಿನಾಚರಣೆ ಅಂಗವಾಗಿ ಕಳೆದ 11 ವರ್ಷಗಳಿಂದಲೂ ರಕ್ತದಾನ -ಶಿಬಿರವನ್ನು ಆಯೋಜಿಸಲಾಗುತ್ತಿದೆ.
ಶುಕ್ರವಾರ ಏಕ ಕಾಲದಲ್ಲಿ ಮೇಟಗಳ್ಳಿಯಲ್ಲಿರುವ ಸಂಸ್ಥೆಯ -ಎರಡು ಘಟಕ, ಹೆಬ್ಬಾಳ ಕೈಗಾರಿಕ ಪ್ರದೇಶ, ಜೆಕೆ ಅತಿಥಿ ಗೃಹ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಸಿಐಐ ಮೈಸೂರು ಜೋನ್ ಮಾಜಿ ಅಧ್ಯಕ್ಷ ಸ್ಯಾಮ್ ಚೇರಿಯನ್ ಹಾಗೂ ಜೆಕೆ ಟೈರ್ ಕಂಪೆನಿಯ ನಿರ್ದೇಶಕರಾದ ಸಲ್ವಾಯ್ನ್ ಗೇಬ್ರಿಯಲ್ ಡೆನಿಸ್ ಸಂಗೋತ್
ಉದ್ಘಾಟಿಸಿದರು.
ಅವರು ಈ ವೇಳೆ ಮಾತನಾಡಿದ ಅವರು, ಜೆಕೆ ಟೈರ್ಸ್ ಸಂಸ್ಥೆ ಸಂಸ್ಥಾಪಕರಾದ ದಿವಂಗತ ಹರಿಶಂಕರ್ ಸಿಂಘಾನಿಯಾ ಅವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶ ದಿಂದ ಪ್ರತೀ ವರ್ಷ ಸಂಸ್ಥೆಯ ಸಾವಿರಾರು ಉದ್ಯೋಗಿ ಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಸಂಪ್ರದಾಯ ನಡೆದು ಬಂದಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಕೆ ಟೈರ್ಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಆರ್.ಜಗದೀಶ್ ಮಾತನಾಡಿ, ಕೈಗಾರಿಕೆಗಳಲ್ಲಿ ಈ ರೀತಿ ರಕ್ತದಾನ ಶಿಬಿರ ಆಯೋಜಿಸುವುದರಿಂದ ಸಿಬ್ಬಂದಿ ಹಾಗೂ ಸಂಸ್ಥೆ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಅಲ್ಲದೆ ತುರ್ತು ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ರಕ್ತ ಬೇಕಾದಲ್ಲಿ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಇ.ಗಿರೀಶ್ ಮಾತನಾಡಿ, ಇಂದೋರ್ ನಗರದ ಮಾದರಿಯಲ್ಲಿ ಮೈಸೂರಿನಲ್ಲೂ ಅಗತ್ಯವುಳ್ಳವರಿಗೆ
ಶೇಕಡ ನೂರರಷ್ಟು ರಕ್ತ ಲಭ್ಯವಾಗುವಂತೆ ಮಾಡುವುದು ನಮ್ಮೆಲ್ಲರ ಗುರಿಯಾಗಬೇಕು ಎಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಹೆಚ್ಚಾಗಿದೆ. 5 ವರ್ಷಕ್ಕೂ ಹಿಂದೆ ಜಿಲ್ಲೆಯಲ್ಲಿ ರಕ್ತದ ಬೇಡಿಕೆಯ ಶೇ.60 ರಷ್ಟು ಪೂರೈಕೆಯಾಗುತ್ತಿತ್ತು. ಈಗ ಶೇ.90ರಷ್ಟು ಲಭ್ಯವಾಗುತ್ತಿದೆ. ರಕ್ತದಾನ ಪ್ರೋತ್ಸಾಹಿಸುತ್ತಿದ್ದ ನಟ ಪುನೀತ್ ರಾಜ್‌ಕುಮಾರ್ ನಿಧನರಾದ ನಂತರ ಸಾಕಷ್ಟು ಯುವಕರು ರಕ್ತದಾನಕ್ಕೆ ಮುಂದಾಗುತ್ತಿದ್ದಾರೆ. ಸಂಸ್ಥೆ ಗಳಲ್ಲಿ ಶಿಬಿರ ಆಯೋಜನೆ ಮಾಡಿದರೆ ಖಂಡಿತ ಹೆಚ್ಚು ಮಂದಿ ರಕ್ತ ನೀಡುತ್ತಾರೆ. ಈ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಆಡಳಿತ ಮಂಡಳಿಯವರು ಸಾಮಾಜಿಕ ಕಳಕಳಿಯಿಂದ ಸಹಕಾರ ನೀಡಬೇ ಕೆಂದು ಮನವಿ ಮಾಡಿದರು.
ಈ ವೇಳೆ ಜೀವಧಾರ ರಕ್ತನಿಧಿ ಕೇಂದ್ರದ ಮುತ್ತಣ್ಣ, ಲಯನ್ ಮನೋಜ್ ಕುಮಾರ್,
ಕೆ.ಆರ್.ಆಸ್ಪತ್ರೆ ರಕ್ತನಿಧಿ ಕೇಂದ್ರದ ಅಧಿಕಾರಿ ಕುಸುಮ, ಜೆಕೆ ಟೈರ್ ಕಂಪನಿಯ ಅಧಿಕಾರಿಗಳಾದ ರಾಜೀವ್ ಕುಮಾರ್, ಡೊನಾಲ್ಡ್, ಸುಬ್ರಮಣ್ಯ, ನವೀನ್, ರಾಮ್ ಪ್ರಸಾದ್, ರವೀಂದ್ರ, ನಾಗರಾಜ್, ಶ್ರೀನಾಥ್ ಹಾಗೂ ಕಾರ್ಮಿಕರ ಯೂನಿಯನ್ ಸಂಘದ ಪದಾಧಿಕಾರಿಗಳಾದ ಚನ್ನಕೇಶವ, ದಾದಾಪೀರ್, ಅಶೋಕ್, ಶಿವಕುಮಾರ್ , ಕಾಂತರಾಜು, ರವಿಕುಮಾರ್ ಹಾಗೂ ಇತರೆ ಸಿಬ್ಬಂದಿಗಳು, ಅಧಿಕಾರಿಗಳು ಆಸರೆ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.