ಬೆಂಗಳೂರು: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಾಕಿಯಿರುವ ಸುಮಾರು 4195 ಕೋಟಿ ರೂ. ಕೇಂದ್ರದ ಪಾಲು ಬಿಡುಗಡೆಯಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರು ಕೇಂದ್ರವನ್ನು ಒತ್ತಾಯಿಸಿ ಬಾಕಿ ಅನುದಾನವನ್ನು ತರಲು ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಾಕಿಯಿರುವ ಅನುದಾನವನ್ನು ಒದಗಿಸುವಂತೆ ಪ್ರಧಾನಮಂತ್ರಿ ಮತ್ತು ಕೇಂದ್ರ ವಿತ್ತಸಚಿವರನ್ನು ಈಗಾಗಲೇ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲಿಸಲು ರಚಿಸಲಾದ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಯನ್ನು ನಡೆಸಲಾಗಿದೆ. ಸುಮಾರು 67 ಕೇಂದ್ರ ಪುರಸ್ಕೃತ ಯೋಜನೆಗಳಿದ್ದು, ಅವುಗಳ ಪ್ರಗತಿಪರಿಶೀಲನೆ ನಡೆಸಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೇಂದ್ರ ಹಾಗೂ ರಾಜ್ಯದ ಪಾಲು 50:50 , 60:40 , 70:30 ರಷ್ಟಿರುತ್ತದೆ.
ಕರ್ನಾಟಕದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ 46859 ಕೋಟಿ ಖರ್ಚು ಮಾಡಲಾಗುತ್ತಿದೆ. 2024-25ರ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯದ ಅನುದಾನ 24960 ಕೋಟಿ ರೂ. ಕೇಂದ್ರದ ಅನುದಾನ 22758ಕೋಟಿ ರೂಪಾಯಿಗಳಿದ್ದು ಕೇಂದ್ರದಿಂದ 18561ಕೋಟಿ ಮಾತ್ರ ಬಿಡುಗಡೆ ಆಗಿದೆ 4195 ಕೋಟಿ ರೂ ಇನ್ನೂ ಬಿಡುಗಡೆಯಾಗಿಲ್ಲ ಎಂದು ಮಾಹಿತಿ ನೀಡಿದರು.
ರಾಜ್ಯದ ಪಾಲು ಹೆಚ್ಚಿರುವ ಕೇಂದ್ರ ಪುರಸ್ಕೃತ ಯೋಜನೆಗಳಡಿ ಶೇ. 83 ರಷ್ಟು ಅನುದಾನ ಖರ್ಚಾಗಿದ್ದು, ಕೇಂದ್ರದಿಂದ ತಡವಾಗಿ ಅನುದಾನ ಬಿಡುಗಡೆಯೂ ಸೇರಿದಂತೆ ಹಲವು ಸಮಸ್ಯೆಗಳನ್ನು ಅಧಿಕಾರಿಗಳು ವಿವರಿಸಿದ್ದಾರೆ. ಆದ್ದರಿಂದ 2025-26 ರ ಸಾಲಿನಿಂದ ಶೇ.100 ರಷ್ಟು ಅನುದಾನವನ್ನು ಖರ್ಚು ಮಾಡಬೇಕಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ನಿಗದಿತ ಸಮಯದಲ್ಲಿ ಅನುದಾನ ಬಿಡುಗಡೆ ಮಾಡಲು ಕೇಂದ್ರವನ್ನು ಕೋರುವಂತೆ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರಿಗೂ ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ತನ್ನ ಪಾಲನ್ನು ನೀಡಲೇಬೇಕು. ಕೇಂದ್ರದ ಪಾಲು ನೀಡಲು ರಾಜ್ಯ ಸರ್ಕಾರ ಈಗಾಲೇ ಪತ್ರ ಬರೆದಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
