ಪಾಕಿಸ್ತಾನ: ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನದ ಸೇನೆಯಿಂದ ಬಂಧನಕ್ಕೊಳಗಾಗಿದ್ದ ಬಿಎಸ್‌ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಪಾಕ್ ಬಿಡುಗಡೆ ಮಾಡಿದೆ.
ವಾಘಾ ಗಡಿ ಮೂಲಕ ಅವರು ಭಾರತಕ್ಕೆ ಹಿಂದಿರುಗಿದ್ದಾರೆ.
ಪೂರ್ಣಮ್ ಕುಮಾರ್ ಶಾ ಅವರನ್ನು ಬುಧವಾರ ಭಾರತೀಯ ಅಧಿಕಾರಿಗಳಿಗೆ ಪಾಕ್ ಸೇನೆ ಹಸ್ತಾಂತರಿಸಲಾಗಿದೆ.
ಅಮೃತಸರದ ಅಟ್ಟಾರಿಯಲ್ಲಿರುವ ಜಂಟಿ ಚೆಕ್ ಪೋಸ್ಟ್‌ನಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಹಸ್ತಾಂತರ ಪ್ರಕ್ರಿಯೆ ನಡೆಯಿತು ಮತ್ತು ಕೆಲ ಶಿಷ್ಟಾಚಾರಗಳನ್ನು ಅನುಸರಿಸಿ ಶಾಂತಿಯುತವಾಗಿ ಹಸ್ತಾಂತರ ನಡೆಸಲಾಯಿತು ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಈಗ ಭದ್ರತಾ ಅಧಿಕಾರಿಗಳು ಶಾ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಏಪ್ರಿಲ್ 23 ರಂದು ಪಂಜಾಬ್‌ನ ಫಿರೋಜ್‌ಪುರ ಬಳಿ ಅಂತಾರಾಷ್ಟ್ರೀಯ ಗಡಿಯನ್ನು ಅಜಾಗರೂಕತೆಯಿಂದ ದಾಟಿದ ನಂತರ 182 ನೇ ಬೆಟಾಲಿಯನ್‌ನ ಬಿಎಸ್‌ಎಫ್ ಜವಾನ್ ಶಾ ಅವರನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ್ದರು.
ಆಕಸ್ಮಿಕವಾಗಿ ಗಡಿ ದಾಟಿದ ಭಾರತೀಯ ಯೋಧನನ್ನು ಬಂಧಿಸಿದ ಪಾಕಿಸ್ತಾನ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಭೂಪ್ರದೇಶಕ್ಕೆ ಬಿಎಸ್‌ಎಫ್ ಕಾನ್‌ಸ್ಟೆಬಲ್ ಆಕಸ್ಮಿಕವಾಗಿ ದಾಟಿಹೋಗಿದ್ದರು.
ಪಾಕಿಸ್ತಾನ ರೇಂಜರ್‌ಗಳು ಭಾರತೀಯ ಪಡೆಗಳೊಂದಿಗಿನ ಎಲ್ಲಾ ಧ್ವಜ ಸಭೆಗಳನ್ನು ಸ್ಥಗಿತಗೊಳಿಸಿದ್ದರು.
ಶಾ ಸೇನಾ ಸಮವಸ್ತ್ರ ಧರಿಸಿದ್ದರು ಜತೆಗೆ ಸೇವಾ ಬಂದೂಕು ಹೊಂದಿದ್ದರು. ರೈತರೊಂದಿಗೆ ಇದ್ದ ಇವರು, ವಿಶ್ರಾಂತಿಗಾಗಿ ನೆರಳು ಅರಸಿ ಹೊರಟಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗಡಿ ದಾಟಿಬಿಟ್ಟಿದ್ದರು.
ಕೂಡಲೇ ಅವರನ್ನು ಪಾಕಿಸ್ತಾನಿ ಸೇನೆ ವಶಕ್ಕೆ ಪಡೆದಿತ್ತು.
ಇಂಥ ಘಟನೆಗಳು ಎರಡೂ ಕಡೆಯಿಂದ ಆಗಾಗ ನಡೆಯುತ್ತಲೇ ಇರುತ್ತವೆ. ಹೀಗಾಗಿ ಇದು ವಿಶೇಷ ಪ್ರಕರಣವಲ್ಲ. ಆದರೆ ಪಹಲ್ಗಾಮ್ ಘಟನೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಬಿಗುವಿನ ವಾತಾವರಣ ಸೃಷ್ಟಿಯಾಗಿರುವುದರಿಂದ ಈ ಘಟನೆ ಮಹತ್ವ ಪಡೆದುಕೊಂಡಿದೆ.