ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬಲವಂತದ ಮತಾಂತರದ ಆರೋಪ ಕೇಳಿಬಂದಿದ್ದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಿಷನರಿಗಳು ಹಣದ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಬಲವಂತದ ಮತಾಂತರದ ವಿರುದ್ಧ ಶ್ರೀರಂಗಪಟ್ಟಣ ಹಿಂದೂ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.
ಶ್ರೀರಂಗಪಟ್ಟಣ ಬಸ್ ನಿಲ್ದಾಣದಿಂದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿವರೆಗೆ ಮೆರವಣಿಗೆ ಹೊರಟಿತು.
ಈ ವೇಳೆ ಬಾಲರಾಜ್ ಮತ್ತಿತರ ಮುಖಂಡರು ಮಾತನಾಡಿ, ಬಲವಂತದ ಮತಾಂತರವನ್ನು ಖಂಡಿಸಿದರು.ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ನಡೆದ ಘಟನೆಯೊಂದರಲ್ಲಿ, ಮತಾಂತರಕ್ಕೆ ಒಪ್ಪದ ಪತ್ನಿ ಹಾಗೂ ಅತ್ತೆಯ ಮೇಲೆ ಗಂಭೀರ ಹಲ್ಲೆ ನಡೆಸಿದ ಪ್ರಕರಣವೂ ಹಿಂದೂ ಸಂಘಟನೆಗಳ ಆಕ್ರೋಶ, ಹೋರಾಟಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲ ಇಂತಹ ಘಟನೆಗಳು ಹೆಚ್ಚಾಗುತ್ತವೆ ಎಂದು ಕಿಡಿಕಾರಿದರು.
ಬಲವಂತದ ಮತಾಂತರದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬೃಹತ್ ಜನಾಂದೋಲನಕ್ಕೆ ಕರೆ ನೀಡಿದ್ದೇವೆ ಎಂದು ಮುಖಂಡರು ತಿಳಿಸಿದರು.
ಮೈಸೂರು: ಬೆಂಗಳೂರಿನಿಂದ ಮೈಸೂರಿಗೆ ಸಂಚರಿಸುವ ರೈಲುಗಳು ಶ್ರೀರಂಗಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಕೋರಿ ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವರಾದ ವಿ ಸೋಮಣ್ಣನವರಿಗೆ ಮನವಿ ಮಾಡಲಾಯಿತು.
ಇಂದು ಸಚಿವ ವಿ ಸೋಮಣ್ಣ ಅವರನ್ನು ಮೈಸೂರಿನ ವಿಶ್ರಾಂತಿ ಗ್ರಹದಲ್ಲಿ ಭೇಟಿಯಾಗಿ ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದಲ್ಲಿ ಮೊದಲು ನಿಲುಗಡೆ ಆಗುತ್ತಿದ್ದ ಎಲ್ಲಾ ರೈಲುಗಳನ್ನು ನಿಲ್ಲಿಸುವಂತೆ ಹಿಂದೂ ಜಾಗರಣ ವೇದಿಕೆಯವರು ಶ್ರೀರಂಗಪಟ್ಟಣ ಜನತೆ ಪರವಾಗಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಳೆದ ಬಾರಿ ಮಂಡ್ಯ ಜಿಲ್ಲೆ ಮಾಜಿ ಸಂಸದರಾದ ಸುಮಲತಾ ಅವರಿಗೆ ನೀಡಿದ ಮನವಿಯ ಪ್ರತ್ಯುತ್ತರವಾಗಿ ಕೇಂದ್ರ ರೈಲ್ವೆ ಇಲಾಖೆಯಿಂದ ಬಂದಿದ್ದ ಉತ್ತರದ ಪ್ರತಿಯನ್ನು ಶ್ರೀರಂಗಪಟ್ಟಣದಲ್ಲಿ ರೈಲು ನಿಲುಗಡೆಯಾದರೆ ಗರಿಷ್ಠ 3000 ಆದಾಯ ಬರುತ್ತದೆ ಆದರೆ ಒಮ್ಮೆ ರೈಲು ನಿಂತು ಹೊರಡಲು 8 ರಿಂದ 10,000 ಖರ್ಚು ಬರುತ್ತದೆ ಎಂದು ರೈಲ್ವೆ ಇಲಾಖೆಯಿಂದ ಬಂದಿದ್ದ ಪ್ರತಿ ಉತ್ತರವನ್ನು ಲಗತ್ತಿಸಿ ಮನವರಿಕೆ ಮಾಡಿಕೊಡಲಾಯಿತು.
ಮನವಿಗೆ ಸ್ಪಂದಿಸಿದ ಸಚಿವ ಸೋಮಣ್ಣ ಅವರು, ಪೂರ್ವದಲ್ಲಿ ನಿಲಗಡೆಯಾಗುತ್ತಿದ್ದ ಎಲ್ಲಾ ರೈಲುಗಳನ್ನು ನಿಲುಗಡೆ ಮಾಡುವ ಭರವಸೆ ನೀಡಿದರು.
ಈ ವೇಳೆ ಶ್ರೀರಂಗಪಟ್ಟಣ ತಾಲೂಕಿನ ಪುರ ಜನರು ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು. .
ಶ್ರೀರಂಗಪಟ್ಟಣ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪುರಾಣ ಪ್ರಸಿದ್ದ ಆದಿ ರಂಗನಾಥ ಸ್ವಾಮಿಗೆ 35ನೇ ವರ್ಷದ ಬೆಣ್ಣೆ ಅಲಂಕಾರ ಹಾಗೂ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದ್ದು ಸಾವಿರಾರು ಮಂದಿ ಸಂಭ್ರಮದಿಂದ ಪಾಲ್ಗೊಂಡಿದ್ದರು.
ದೇವಸ್ಥಾನದ ಮುಂಭಾಗದಿಂದ ಹಿಡಿದು 200 ಮೀಟರ್ ವರೆಗೆ ದೀಪಗಳನ್ನು ಇಟ್ಟು ಸಂಧ್ಯಾ ಕಾಲದಲ್ಲಿ ಹೋಮವನ್ನು ಮಾಡಿ ದೀಪವನ್ನ ಪ್ರಜ್ವಲಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಬೆಳಿಗ್ಗೆ ಆದಿ ರಂಗನಿಗೆ ಬೆಣ್ಣೆಯ ಅಲಂಕಾರ ಮಾಡಲಾಯಿತು.ಭಕ್ತರು ವೈಕುಂಠ ದ್ವಾರ ಪ್ರದಕ್ಷಣೆ ಮಾಡಿ ದೇವರ ಕೃಪೆಗೆ ಪಾತ್ರರಾದರು.
ನಮ್ಮ ರೈತಪಿ ವರ್ಗದವರು ತಾವು ಬೆಳೆದ ಬೆಳೆಯನ್ನು ರಾಶಿ ಮಾಡಿ ಪೂಜೆ ಸಲ್ಲಿಸಿ, ಹಸು ಕರು ಮತ್ತು ರಾಸುಗಳನ್ನು ತೊಳೆದು ಸಿಂಗಾರ ಮಾಡಿ ಹುಲ್ಲಿನ ಕಂತೆಗಳನ್ನ ಹಾಕಿ ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದರು.
ಮಕರ ಸಂಕ್ರಾಂತಿ ಹಿನ್ನೆಲೆ ಹೀಗಿದೆ..! ಮಕರ ಸಂಕ್ರಾಂತಿ ಹಬ್ಬವನ್ನೇಕೇ ನಾವು ಆಚರಿಸಬೇಕು.. ಮಕರ ಸಂಕ್ರಾಂತಿ ಹಬ್ಬದ ಪೌರಾಣಿಕ ಹಿನ್ನೆಲೆ ಮತ್ತು ದಂತಕಥೆಗಳು ಹೀಗಿದೆ..
ಮಕರ ಸಂಕ್ರಾಂತಿಯ ದಿನದಿಂದ ಸೂರ್ಯನು ಉತ್ತರಕ್ಕೆ ತಿರುಗುತ್ತಾನೆ ಮತ್ತು ಈ ಹಬ್ಬವನ್ನು ಭಾರತದಾದ್ಯಂತ ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತದೆ.
ಅಖಂಡ ಭಾರತದೆಲ್ಲೆಡೆ ಬೆಳೆಗಳು ಬಂದ ಖುಷಿಯಲ್ಲಿ ಈ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಆದರೆ ಈ ದಿನ ಅನೇಕ ಐತಿಹಾಸಿಕ ಮತ್ತು ಪೌರಾಣಿಕ ಘಟನೆಗಳು ನಡೆದಿವೆ.
ಈ ಹಬ್ಬದ ದಂತಕಥೆ ಮತ್ತು ಪೌರಾಣಿಕ ಹಿನ್ನೆಲೆಯನ್ನು ತಿಳಿಯೋಣ ಬನ್ನಿ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಮಕರ ಸಂಕ್ರಾಂತಿಯ ದಿನದಂದು, ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನದಿಂದ ದೇವತೆಗಳ ಆರು ತಿಂಗಳ ದಿನ ಪ್ರಾರಂಭವಾಗುತ್ತದೆ, ಇದು ಆಷಾಢ ಮಾಸದವರೆಗೆ ಇರುತ್ತದೆ.
ಈ ದಿನ ಸೂರ್ಯನು ತನ್ನ ಮಗನಾದ ಶನಿಯ ಮನೆಗೆ ಒಂದು ತಿಂಗಳು ಹೋಗುತ್ತಾನೆ, ಏಕೆಂದರೆ ಮಕರ ರಾಶಿಯ ಅಧಿಪತಿ ಶನಿ ಆಗಿರುತ್ತಾನೆ.
ಮಕರ ಸಂಕ್ರಾಂತಿಯ ದಿನದಂದು, ಗಂಗಾ ದೇವಿಯು ಭಗೀರಥನನ್ನು ಅನುಸರಿಸಿ, ಕಪಿಲ ಮುನಿಯ ಆಶ್ರಮದ ಮೂಲಕ ಹೋಗಿ ಸಾಗರವನ್ನು ಸೇರಿದಳು ಎನ್ನುವ ಪುರಾಣ ಕಥೆಯಿದೆ.
ಭಗೀರಥ ಮಹಾರಾಜನು ಈ ದಿನದಂದು ತಮ್ಮ ಪೂರ್ವಜರಿಗೆ ತರ್ಪಣವನ್ನು ಅರ್ಪಿಸಿದ್ದನು. ಆದ್ದರಿಂದ ಮಕರ ಸಂಕ್ರಾಂತಿಯಂದು ಗಂಗಾಸಾಗರದಲ್ಲಿ ಜಾತ್ರೆ ನಡೆಯುತ್ತದೆ.
ರಾಜ ಭಗೀರಥನು ತನ್ನ ಪೂರ್ವಜರಿಗೆ ಗಂಗಾಜಲ, ಅಕ್ಷತೆ, ಎಳ್ಳುಗಳಿಂದ ಶ್ರಾದ್ಧವನ್ನು ಅರ್ಪಿಸಿದ್ದನು. ಅಂದಿನಿಂದ ಇಂದಿನವರೆಗೂ ಮಾಘ ಮಕರ ಸಂಕ್ರಾಂತಿಯಂದು ಪವಿತ್ರ ನದಿಗಳಲ್ಲಿ ಸ್ನಾನ ಮತ್ತು ಶ್ರಾದ್ಧ, ತರ್ಪಣ ಪದ್ಧತಿಗಳು ರೂಢಿಯಲ್ಲಿದೆ. ಕಪಿಲ ಮುನಿಯ ಆಶ್ರಮದಲ್ಲಿ ಮಕರ ಸಂಕ್ರಾಂತಿಯಂದು ಗಂಗೆಯನ್ನು ಪ್ರತಿಷ್ಠಪಿಸಲಾಯಿತು. ರಾಜ ಭಗೀರಥನ ಪೂರ್ವಜರು ಪವಿತ್ರ ಗಂಗಾಜಲದ ಸ್ಪರ್ಶದಿಂದ ಸ್ವರ್ಗವನ್ನು ಪಡೆದರು.
ಶ್ರೀರಂಗಪಟ್ಟಣ: ಬೆಳಿಗ್ಗೆ ಎದ್ದ ತಕ್ಷಣ ನಾವು ಭೂದೇವಿಯನ್ನು ನೆನೆಯಬೇಕು ಎಂದು ಓಂ ಶ್ರೀನಿಕೇತನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಂ.ಪುಟ್ಟೇಗೌಡರು ತಿಳಿಸಿದರು.
ಶ್ರೀರಂಗಪಟ್ಟಣದ ಓಂ ಶ್ರೀನಿಕೇತನ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸುಗ್ಗಿ ಸಂಭ್ರಮಾಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಅನ್ನ ನೀಡುವ ಮತ್ತು ಸಕಲ ಜೀವರಾಶಿ ಗಳಿಗೆ ಆಹಾರವನ್ನು ನೀಡುವ ಈ ಬುವಿಯನ್ನು ನೆನೆಯಬೇಕು ಎಂದು ಹೇಳಿದರು.
ನಮ್ಮ ಜನಪದರು ಎಳ್ಳು ಜೀರಿಗೆ ಬೆಳೆಯೊಳ ಭೂತಾಯ ಬೆಳಿಗ್ಗೆ ಎದ್ದೊಂದು ಘಳಿಗೆ ನೆನೆದೆನು ಎಂದು ಕೃತಜ್ಞತಾ ಸಮರ್ಪಣಾ ಭಾವನೆಯಿಂದ ನೆನೆಯುತ್ತಿದ್ದರು, ಭಾರತೀಯ ಸಂಸ್ಕೃತಿಯಲ್ಲಿ ಭೂಮಿ ಮತ್ತು ಸೂರ್ಯ ಚಂದ್ರ,ನದಿ ನೀರು ಹಾಗೂ ನಾವು ಬೆಳೆದ ಭತ್ತ, ರಾಗಿ, ಜೋಳದ ರಾಶಿಗಳಿಗೆ ಹಿಗ್ಗಿನಿಂದ ಸುಗ್ಗಿ ಪೂಜೆಯನ್ನು ನಮ್ಮ ಗ್ರಾಮೀಣ ಪ್ರದೇಶದ ಜನರು ಮಾಡುತ್ತಿದ್ದರೆಂದು ತಿಳಿಸಿದರು,
ಓಂ ಶ್ರೀ ನಿಕೇತನ ಶಾಲಾ ಆಡಳಿತಾಧಿಕಾರಿ ಆಶಾ ಲತಾ ಪುಟ್ಟೇಗೌಡರು ಸಾಂಪ್ರದಾಯಿಕವಾಗಿ ಭತ್ತದರಾಶಿಗೆ ಮತ್ತು ಸಕ್ಕರೆ ನಾಡಿನ ವಾಣಿಜ್ಯ ಬೆಳೆಯಾದ ಕಬ್ಬಿಗೆ ಪೂಜೆ ಸಲ್ಲಿಸಿ ಎಳ್ಳು ಜೀರಿಗೆ ವಿತರಣೆ ಮಾಡಿ ಸಂಭ್ರಮಿಸಿದರು.
ವಿದ್ಯಾರ್ಥಿಗಳು ಇದೇವೇಳೆ ವೀರಗಾಸೆ ಕುಣಿತ,ಮರದ ಕಾಲು ನಡಿಗೆ ಹಾಗೂ ಪೂಜಾ ಕುಣಿತಕ್ಕೆ ಹೆಜ್ಜೆಹಾಕಿ ನೃತ್ಯ ಮಾಡಿದರು.
ರೈತರ ಕೃಷಿ ಪರಿಕರಗಳಾದ ಎತ್ತಿನಗಾಡಿ, ಹುಲ್ಲಿನ ಬಣವೆ,ಮೊರ, ಕಟ್ಟೊಂದ್ರಿ, ಕುಡುಗೊಲು,ಮಚ್ಚು,ಏಕಾಸಿ,ಪೀಕಾಸಿ ಗುದ್ದಲಿ ಹಾಗೂ ಭತ್ತದ ಪಾದದ ಬಡಿಗೆ ಹೊರೆಯನ್ನು ಪರಿಚಯಿಸಲಾಯಿತು.
ಶಾಲಾ ಟ್ರಸ್ಟಿ ಗಳಾದ ವಿ.ನಾರಾಯಣ್,ಕೆ.ಗೋಪಲ್ ಗೌಡ, ಪ್ರಿನ್ಸಿಪಾಲ್ ಚನ್ನಕೇಶ್ವರ್, ಮುಖ್ಯ ಶಿಕ್ಷಕ ಜರ್ಲಿನ್ ಉಪಸ್ಥಿತರಿದ್ದರು.
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ತಾಲೂಕಿನ ಪ್ರಜ್ಞಾವಂತರ ವೇದಿಕೆಯಿಂದ ಸಂವಿಧಾನ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.
ಶ್ರೀರಂಗಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಪೇಟೆಬೀದಿಯ ಮೂಲಕವಾಗಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದು ಪೊಲೀಸ್ ಸ್ಟೇಷನ್ ಸರ್ಕಲ್ ನಿಂದ ಯುವ ಅಂಬೇಡ್ಕರ್ ಅವರ ಪುತ್ಥಳಿ ತನಕ ಮೆರವಣಿಗೆ ಮಾಡಲಾಯಿತು.
ನವೆಂಬರ್ 26 ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ ದಿನ. ಬಾಬಾ ಸಾಹೇಬ ಸಾಹೇಬ್ ಅಂಬೇಡ್ಕರ್ ರವರು ಭಾರತದ ಸಮಸ್ತ ನಾಗರಿಕರಿಗೂ ಸಮಾನತೆಯ ಹಕ್ಕನ್ನು ತೋರಿಸಿಕೊಟ್ಟ ಮಹಾನ್ ವ್ಯಕ್ತಿ.
ದೀನ, ದುರ್ಬಲರಿಗೆ ಶೋಷಿತ ದಮನಿತ ವರ್ಗದವರಿಗೆ ಮೇಲು ಕೀಳು ಎಂಬ ಮನೋಭಾವನೆಯನ್ನು ಬಿಟ್ಟು ನಾವೆಲ್ಲ ಒಂದು, ನಾವು ಜಾತಿ ಧರ್ಮ ಬೇದಭಾವವನ್ನೆಲ್ಲ ಮರೆತು ನಾವು ಭಾರತೀಯರು ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂಬ ಆಶಯವನ್ನು ನೀಡಿದರು.
ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗುವ ಆಶಯವಿದೆ ಎಂದು ತೋರಿಸಿಕೊಟ್ಟ ಮಹಾನ್ ನಾಯಕನಿಗೆ ಸಂವಿಧಾನ ರಚನೆಯ ದಿನದಂದು ಶ್ರೀರಂಗಪಟ್ಟಣದ ವಕೀಲರಾದ ಲಾಯರ್ ವೆಂಕಟೇಶ್, ಓಂ ಶ್ರೀನಿಕೇತನ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಆಶಾಲತಾ ಅವರು ಹಾಗೂ ಪ್ರಜ್ಞಾವಂತ ವೇದಿಕೆಯ ಸದಸ್ಯರುಗಳು ನಮನ ಸಲ್ಲಿಸಿ ಸ್ಮರಿಸಿದರು.
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ನೆಲೆಸಿರುವ ಕಾಶಿ ಚಂದ್ರಮೌಳೇಶ್ವರನಿಗೆ ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ರುದ್ರ ಹೋಮ ನೆರವೇರಿಸಲಾಯಿತು.
ಶ್ರೀರಂಗಪಟ್ಟಣದ ಜಿಬಿ ಹೊಳೆ ನದಿಯ ದಂಡೆಯ ಪಕ್ಕದಲ್ಲಿ ಸ್ವಯಂಭೋ ಆಗಿ ಉದ್ಭವವಾಗಿರುವ ಶಿವಲಿಂಗಕ್ಕೆ ರುದ್ರಾಭಿಷೇಕ ಮತ್ತು ರುದ್ರಹೋಮವನ್ನು ವೇದ ಬ್ರಹ್ಮ ಶ್ರೀ ಡಾ. ಭಾನುಪ್ರಕಾಶ್, ವೇದ ಬ್ರಹ್ಮ ಶ್ರೀ ಕೃಷ್ಣಾ ಭಟ್ ಹಾಗೂ ಜಿಬಿ ಹೊಳೆಯ ಪುರೋಹಿತ ವರ್ಗ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ನಂತರ ಮಹಾಮಂಗಳಾರತಿ ಮಾಡಲಾಯಿತು. 5000 ಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣ ಮಾಡಲಾಯಿತು.
ಶ್ರೀರಂಗಪಟ್ಟಣದ ಬಹಳಷ್ಟು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ ಕಾಶಿ ಚಂದ್ರಮೌಳೇಶ್ವರನ ಭಕ್ತಿಗೆ ಪಾತ್ರರಾದರು.
ಶ್ರೀರಂಗಪಟ್ಟಣ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಆದರೆ ಉಪಚುನಾವಣೆಯ ಫಲಿತಾಂಶವನ್ನೇ ಕ್ಲೀನ್ ಚಿಟ್ ಎನ್ನುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಇದು ಕ್ಲೀನ್ ಚಿಟ್ ಅಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಗ್ಗಳ್ಳಿಯಲ್ಲಿ ಮಾತನಾಡಿದ ಅವರು, ಈ ಫಲಿತಾಂಶವನ್ನೇ ಕ್ಲೀನ್ ಚಿಟ್ ಎನ್ನುತ್ತಿದ್ದಾರೆ,ಆದರೆ ಇದು ಕ್ಲೀನ್ ಚಿಟ್ ಅಲ್ಲ ಎಂದು ಟಾಂಗ್ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಎಲ್ಲಿಯವರೆಗೆ ಬಡವರಿಗೆ ನ್ಯಾಯ ಸಿಗುವುದಿಲ್ಲವೋ, ಅಲ್ಲಿವರೆಗೆ ಪಾಪಿಗಳ ಸರ್ಕಾರ ಎಂದು ಹೇಳುತ್ತೇನೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಮೂರು ಸೀಟು ಗೆದ್ದಿದೆ. ಆದರೆ ಬಿಜೆಪಿ ಅಂದು 18 ಸೀಟು ಗೆದ್ದಿತ್ತು. ಮುಂದಿನ ವರ್ಷಗಳಲ್ಲಿ ಕಾಂಗ್ರೆಸ್ ಸೋತು ಮೂರು ನಾಮ ಹಾಕಿಕೊಳ್ಳಲಿದೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಭಯದಿಂದಾಗಿ ಅನೇಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ,ಚುನಾವಣಾ ಫಲಿತಾಂಶವನ್ನು ಕ್ಲೀನ್ ಚಿಟ್ ಎನ್ನಲಾಗುವುದಿಲ್ಲ. ಕ್ಲೀನ್ ಚಿಟ್ ಅನ್ನು ನ್ಯಾಯಾಲಯ ಕೊಡಬೇಕಿದೆ ಎಂದು ತಿಳಿಸಿದರು.
14 ಸೈಟುಗಳನ್ನು ಲೂಟಿ ಮಾಡಿದ ಸಿಎಂ ಸಿದ್ದರಾಮಯ್ಯ ಅದನ್ನು ಬಡವರಿಗೆ ನೀಡಬೇಕಿತ್ತು. ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪಕ್ಕೆ ಸಾಕ್ಷಿ ಇಲ್ಲದೆ ಪ್ರಕರಣ ಬಿದ್ದುಹೋಗಿದೆ. ಇದನ್ನೇ ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜನರ ಮೇಲೆ ತೆರಿಗೆ ಹೊರೆ ಹೇರಿದೆ. ಜೊತೆಗೆ 1 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ ಎಂದು ಅಶೋಕ್ ಆರೋಪಿಸಿದರು.
ಬಡವರ ಪರ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಎಷ್ಟು ಜಲಾಶಯ ನಿರ್ಮಿಸಿದ್ದಾರೆ, ಮೇಕದಾಟು ಎಂದು ಪ್ರತಿಭಟನೆ ಮಾಡಿ, ಅಲ್ಲಿ ಅಣೆಕಟ್ಟು ಕಟ್ಟುವ ಕೆಲಸ ಮಾಡಿಲ್ಲ. ಒಂದೇ ಒಂದು ಆಸ್ಪತ್ರೆ ಕೂಡ ನಿರ್ಮಿಸಿಲ್ಲ. ಆದರೆ ಆಸ್ಪತ್ರೆಯಲ್ಲಿ ಶುಲ್ಕಗಳನ್ನು ಮಾತ್ರ ಏರಿಸಲಾಗಿದೆ. ಎಲ್ಲವೂ ಉಚಿತ ಎಂದು ಸುಳ್ಳು ಹೇಳಿ ಈಗ ಎಲ್ಲ ದರಗಳನ್ನು ಏರಿಸಲಾಗಿದೆ. ಮಹಿಳೆಯರಿಗೆ 2,000 ರೂ. ನೀಡುತ್ತಿದ್ದೇವೆ ಎಂದು ಹೇಳಿ ಇಡೀ ಕುಟುಂಬದ ಆರ್ಥಿಕತೆಯನ್ನು ಗುಡಿಸಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ವಕ್ಫ್ ಮಂಡಳಿಯಿಂದ ಹಿಂದೂ ದೇವಸ್ಥಾನಗಳ ಜಾಗ ಕಬಳಿಕೆಯಾಗಿದೆ. ಲಿಂಗಾಯತರ ಮಠದ ಜಾಗ, ಸ್ಮಶಾನ, ರೈತರ ಜಮೀನನ್ನು ವಕ್ಫ್ ತನ್ನದೆಂದು ಘೋಷಿಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಶ್ರೀರಂಗಪಟ್ಟಣದ ದೇವಸ್ಥಾನದ ಜಾಗವನ್ನು ಕೂಡ ವಕ್ಫ್ ಕಬಳಿಸಿದೆ. ಇಲ್ಲಿನ ಎಲ್ಲ ಭೂಮಿ ಮುಸ್ಲಿಮರದ್ದು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಈಗ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಏನೂ ಉಳಿಯುವುದಿಲ್ಲ ಎಂದು ಅಶೋಕ್ ಎಚ್ಚರಿಕೆ ನೀಡಿದರು.
ಈ ಉಪಚುನಾವಣೆ ಹಣದ ಗೆಲುವೇ ಹೊರತು ಕಾಂಗ್ರೆಸ್ ಗೆಲುವಲ್ಲ. ಮೂರು ಕ್ಷೇತ್ರಗಳ ಗೆಲುವಿಗೆ ಕಾಂಗ್ರೆಸ್ ಅನವಶ್ಯಕವಾಗಿ ಬೀಗುತ್ತಿದೆ, ಕಾಂಗ್ರೆಸ್‌ಗೆ ಅಭ್ಯರ್ಥಿ ಗತಿ ಇಲ್ಲ ಎಂಬ ಕಾರಣಕ್ಕೆ ಬಿಜೆಪಿಯಲ್ಲಿದ್ದವರನ್ನು ಕರೆಸಿಕೊಳ್ಳಲಾಗಿದೆ. ಈ ಸೋಲಿನಿಂದ ಬಿಜೆಪಿಗೆ ಹಿನ್ನಡೆಯಾಗುವುದಿಲ್ಲ ಇದು ಬಿಜೆಪಿಗೆ ಮಾನದಂಡವೂ ಅಲ್ಲ ಎಂದು ಹೇಳಿದರು
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಅಶೋಕ್ ತಿಳಿಸಿದರು.
ಮೈಸೂರು: ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ನಾಣ್ನುಡಿಯಂತೆ ಸಕ್ಕರೆ ನಾಡಿನ ಅಕ್ಕರೆಯ ಈ ಪುಟ್ಟ ಪೋರಿ ವಿಹಿಕಾ ಸಿ.ಟಿ.ಎಳೆ ವಯಸಿನಲ್ಲೆ ದೇಶ ಗುರುತಿಸುವಷ್ಟು ಸಾಧನೆ ಮಾಡಿದ್ದಾಳೆ.
ವಿಹಿಕಾಗೆ ಇನ್ನೂ 5 ವರ್ಷ 3 ತಿಂಗಳು ಅಷ್ಟೆ.ಈಗಾಗಲೇ ಇಂಟರ್ ನ್ಯಾಷನಲ್ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್, ಬುಕ್ ಆಫ್ ರೆಕಾರ್ಡ್ಸ್ ಮಾಡಿದ್ದಾಳೆ.
ರೆಕಾರ್ಡ್ ಹೋಲ್ಡರ್ ವಿಹಿಕಾ ಸಿ.ಟಿ. ಕತ್ತಿನ ಸುತ್ತ ಹುಲಾ ಹೂಪ್ ಸುತ್ತುತ್ತಲೇ ರಸಾಯನಶಾಸ್ತ್ರದ 118 ಕೋಷ್ಟಕ ಗಳನ್ನು ಕೇವಲ ಒಂದು ನಿಮಿಷದಲ್ಲಿ (ಒಂದು ನಿಮಿಷಕ್ಕೆ ಇನ್ನೂ ಕೆಲ ಸೆಂಟಿ ಸೆಕೆಂಡ್ಸ್ ಇರುವಾಗಲೇ) ಹೇಳುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.
ವಿಹಿಕಾ ಸಿ.ಟಿ.ಅವರು 2024 ಜುಲೈ 26 ರಂದು ಈ ಸಾಧನೆ ಮಾಡಿದ್ದಾರೆ.ಆಗ ಅವಳಿಗೆ 5 ವರ್ಷ 1 ತಿಂಗಳು 23 ದಿನಗಳಾಗಿತ್ತು.
ವಿಹಿಕಾ ಎಸ್. ಟಿ. ಅವಳ ಕುತ್ತಿಗೆಯ ಸುತ್ತ ಹುಲಾ ಹೂಪ್ ಅನ್ನು ತಿರುಗಿಸುವಾಗ ಆವರ್ತಕ ಕೋಷ್ಟಕವನ್ನು ಪಠಿಸಿದ್ದು ವಿಶೇಷವಾಗಿತ್ತು. ಆಕೆ ಈ ಸಾಧನೆ ಮೂಲಕ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಗೆ ಭಾಜನರಾಗಿದ್ದಾರೆ.
ಅಷ್ಟೇ ಅಲ್ಲಾ ಈ ಮಗು ಇನ್ನೂ 3 ವರ್ಷ ಇದ್ದಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾಡಿದ್ದಾಳೆ.
ಇದೆಲ್ಲದರ ವಿವರವನ್ನು ವಿಹಿಕಾ ತಾಯಿ ರಮ್ಯ ಮತ್ತು ಅಜ್ಜಿ ನೇತ್ರಾವತಿ ಅವರೊಂದಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಭವನಕ್ಕೆ ಆಗಮಿಸಿ ಮಾಧ್ಯಮದವರಿಗೆ ನೀಡಿದರು.
ವಿಹಿಕಾ ಸಿ.ಟಿ. ಜೂನ್ 3, 2019 ರಂದು ಜನಿಸಿದ್ದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಚಿಕ್ಕ ಅಂಕನ ಹಳ್ಳಿ ನಿವಾಸಿಗಳಾದ ತೇಜಸ್ವಿ-ರಮ್ಯ ಅವರ ಪುತ್ರಿ.
ಒಂದೂವರೆ ವರ್ಷದವಳಿದ್ದಾಗ ಹಣ್ಣು,ಕಾಯಿಗಳನ್ನು ಹೂಗಳನ್ನು ಗುರುತಿಸುತ್ತಿದ್ದಳು ಎಂದು ಆಕೆಯ ಪ್ರೀತಿಯ ಅಜ್ಜಿ ನೇತ್ರಾವತಿ ಅವರು ಹೇಳುತ್ತಾರೆ.
ಮೂರು ವರ್ಷದವಳಿದ್ದಾಗ 16 ಪ್ರಾಣಿಗಳು, ಮತ್ತು ರಾಷ್ಟ್ರೀಯ ಚಿಹ್ನೆಗಳು, 7 ಆಕಾರಗಳು, 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು,7 ತಾಲೂಕುಗಳನ್ನು ಹೇಳುತ್ತಿದ್ದಳು.
ಭಾರತೀಯ ಪ್ರತಿಜ್ಞೆ, 6 ಶ್ಲೋಕಗಳು, ವರ್ಷದಲ್ಲಿನ ತಿಂಗಳುಗಳು,14 ಕ್ರಿಯಾ ಪದಗಳು,12 ಗಾದೆಗಳು, A – Z ನಿಂದ ವರ್ಣಮಾಲೆಯ ಅಕ್ಷರಗಳು, 49 ಕನ್ನಡ ಅಕ್ಷರಗಳು ಮತ್ತು 4 ಪ್ರಾಸಗಳನ್ನು 3 ವರ್ಷ ಮತ್ತು 2 ತಿಂಗಳ ವಯಸ್ಸಿನಲ್ಲಿ ಅಂದರೆ 2022 ಆಗಸ್ಟ್ 25 ರಂದು ಹೇಳಿ ದೃಢಪಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾಡಿದ್ದಾಳೆ.
ವಿಹಿಕಾ ಈಗ ಕರಾಟೆ ಕಲಿಯುತ್ತಿದ್ದು ಎಲ್ಲೋ ಮತ್ತು ಆರೆಂಜ್ ಬೆಲ್ಟ್ ಪಡೆದಿದ್ದಾಳೆ.ಭಗವದ್ಗೀತೆಯ 35 ಶ್ಲೋಕಗಳನ್ನು ಹೇಳುತ್ತಾಳೆ,ವಿಷ್ಣು ಸಹಸ್ರನಾಮ ಕಲಿಯುತ್ತಿದ್ದಾಳೆ.
ಈ ಬಾಲೆ ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ,ಹೆಚ್ಚು ದಾಖಲೆಗಳನ್ನು ಬರೆಯಲಿ ಎಂದು ವರ್ಷಿಣಿ ನ್ಯೂಸ್ ಹಾರೈಸುತ್ತದೆ.
ಅತಿ ಚಿಕ್ಕ ವಯಸ್ಸಿನಲ್ಲಿ ವಿಶ್ವ ದಾಖಲೆ ಮಾಡಿರುವ ವಿಹಿಕಾಗೆ ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬೆಲವತ್ತ ರಾಮಕೃಷ್ಣ ಮತ್ತು ನಗರ ಅಧ್ಯಕ್ಷ ಕೆ.ಆರ್.ಮಿಲ್ ಆನಂದಗೌಡ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಪುರಸಭೆ ವೃತ್ತದಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ಪಂಚಮುಖಿ ಆಟೋ ಯುವಕರ ಬಳಗದ ವತಿಯಿಂದ ಆಚರಿಸಲಾಯಿತು.
ವಿಶೇಷ ಆಹ್ವಾನಿತರಾಗಿದ್ದ ಶ್ರೀರಂಗಪಟ್ಟಣ ಕ್ಷೇತ್ರದ ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿ ಸಿದ್ದೇಗೌಡ ಅವರು ಮಾತನಾಡಿ ನಾಡು, ನುಡಿ, ಸಂಸ್ಕೃತಿ, ನೆಲ, ಜಲದ ವಿಷಯ ಬಂದಾಗ ನಾವು ಯಾವಾಗಲೂ ಒಂದಾಗಿರಬೇಕು ಕರೆ ನೀಡಿದರು.
ನಮ್ಮ ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯುತ್ತೇವೆ, ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳು ನದಿಗಳು ಹರಿಯುವ, ಸಾಧು-ಸಂತರು-ದಾಸರು- ಶಿವಶರಣರು – ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ ಎಂದು ಹೇಳಿದರು.
ಪ್ರತಿ ವರ್ಷ ನವೆಂಬರ್ 1 ರಂದು ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.