ಮೈಸೂರು: ಏಕಾಏಕಿ ನಂದಿನಿ ತುಪ್ಪದ ದರವನ್ನು ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಯಾವುದೇ ಕಾರಣಕ್ಕೂ ಹಾಲಿನ ದರವನ್ನು ಮತ್ತೆ ಏರಿಕೆ ಮಾಡಬಾರದೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಜಿಎಸ್‌ಟಿ ಇಳಿಕೆ ಖುಷಿಯಲ್ಲಿದ್ದ ರಾಜ್ಯದ ಜನತೆಗೆ, ಸರ್ಕಾರ ನಂದಿನಿ ತುಪ್ಪದ ದರವನ್ನು ಏಕಾಏಕಿ 90 ರೂ. ಏರಿಸಿ ಶಾಕ್ ನೀಡಿದೆ ಎಂದು ಪ್ರತಿಭಟನಾ ನಿರತರು ಕಿಡಿಕಾರಿದರು.
ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಜಿ ಎಸ್ ಟಿ ದರ ಇಳಿಸಿದ್ದರಿಂದ ನಂದಿನಿ ತುಪ್ಪದ ಬೆಲೆ 650 ರೂ ನಿಂದ 610 ರೂ ಗೆ ಇಳಿದಿತ್ತು. ಈಗ ರಾಜ್ಯ ಸರ್ಕಾರ 90 ರೂ ಏಕಾಏಕಿ ಹೆಚ್ಚಿಸಿ ರೂ.700 ಆಗುದೆ.ಇದು ಜನರಿಗೆ ಬಹು ದೊಡ್ಡ ಹೊರೆಯಾಗಿದೆ.
ಇದರಿಂದ ಸರ್ಕಾರದ ನಂದಿನಿ ತುಪ್ಪಕ್ಕೆ ಗ್ರಾಹಕರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗುವ ಸಾಧ್ಯತೆಯಿದೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಈಗ ಕೆಎಂಎಫ್ ನಂದಿನಿ ತುಪ್ಪದ ಬೆಲೆ ಬಹಳ ದುಬಾರಿಯಾಗಿದೆ ಎಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದರು.
ಪಂಚ ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅವುಗಳನ್ನು ನೀಡಲಾಗದೆ ರಾಜ್ಯವನ್ನು ದಿವಾಳಿ ಮಾಡಿದೆ. ಸರ್ಕಾರ 5 ಬಿಟ್ಟಿ ಭಾಗ್ಯಗಳಿಗಾಗಿ ನಮ್ಮ ರಾಜ್ಯದ ಜನತೆಯಿಂದಲೇ ಹಣ ವಸೂಲು ಮಾಡಿ ನಮ್ಮ ತೆರಿಗೆ ಹಣವನ್ನು ಬಿಟ್ಟಿ ಭಾಗ್ಯಗಳಾಗಿ ನೀಡುತ್ತಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿನಿತ್ಯ ಒಂದಲ್ಲ ಒಂದು ದರಗಳನ್ನು ಏರಿಸುತ್ತಿದೆ. ಬಸ್ ದರ, ಡೀಸೆಲ್ ದರ, ಆಸ್ತಿ ದರ, ವಿದ್ಯುತ್ ದರ, ಹಾಲು ಮೊಸರಿನ ದರ, ಸ್ಟ್ಯಾಂಪ್ ಪೇಪರ್ ದರ, ಮಧ್ಯದ ದರ, ಜೊತೆಗೆ ಈಗ ಕೆಎಂಎಫ್ ನಂದಿನಿ ತುಪ್ಪದ ದರವನ್ನು ಏರಿಸಿ, ರಾಜ್ಯದ ಜನತೆಗೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ಎಲ್ಲಾ ರಸ್ತೆಗಳು ಹಾಳಾಗಿ ಗುಂಡಿಗಳಂತಾಗಿದೆ. ಗುಂಡಿ ಮುಚ್ಚಲು ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ರೈತರಿಗೆ ಅವರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಷ್ಟೆಲ್ಲ ಬೆಲೆ ಏರಿಕೆಗಳ ಮಧ್ಯೆ ರಾಜ್ಯ ಸರ್ಕಾರ ಮತ್ತೆ ಹಾಲಿನ ದರವನ್ನು ಏರಿಸಲು ಚಿಂತನೆ ನಡೆಸುತ್ತಿರುವುದು ಹೇಯ ಕೆಲಸ ಎಂದು ಹೇಳಿದರು.
ರಾಜ್ಯ ಸರ್ಕಾರ ಈ ಕೂಡಲೇ ನಂದಿನಿ ತುಪ್ಪದ ಹೆಚ್ಚಿಸಿರುವ ದರವನ್ನು ಇಳಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಸರ್ಕಾರ ಅತೀ ಅಗತ್ಯ ವಸ್ತುವಾಗಿರುವ ಹಾಲಿನ ದರ ಏರಿಕೆ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.
ಗೋಲ್ಡನ್ ಸುರೇಶ್, ಪ್ರಭುಶಂಕರ್, ಕೃಷ್ಣಪ್ಪ, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಮಧುವನ ಚಂದ್ರು, ಪ್ರಜೀಶ್, ಶಿವಲಿಂಗಯ್ಯ, ನೇಹಾ, ಭಾಗ್ಯಮ್ಮ, ಗಿರೀಶ್ ಹೆಚ್, ಶ್ರೀನಿವಾಸ್, ಮಂಜುಳ, ಪದ್ಮ, ಡಾ. ಶಾಂತರಾಜೇಅರಸ್, ಕುಮಾರ್, ಎಳನೀರು ರಾಮಣ್ಣ, ಪ್ರದೀಪ್, ರಾಧಾಕೃಷ್ಣ , ಶಿವರಾಂ, ಸುಶೀಲ, ಹನುಮಂತೇಗೌಡ, ಸುಜಾತಾ, ರಘು ಅರಸ್, ಬಸವರಾಜು, ನಾರಾಯಣ ಗೌಡ, ತ್ಯಾಗರಾಜ್, ರಘು ಆಚಾರ್, ಆನಂದ್ ಗೌಡ,ದರ್ಶನ್ ಗೌಡ, ಗಣೇಶ್ ಪ್ರಸಾದ್, ರವಿ ನಾಯಕ್, ರವೀಶ್, ವಿಷ್ಣು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಂದಿನಿ ತುಪ್ಪದ ದರ ಏರಿಕೆ ಖಂಡಿಸಿಕರ್ನಾಟಕ ಸೇನಾ ಪಡೆ ಪ್ರತಿಭಟನೆ Read More